ಪೋಷಕರೇ ಮಕ್ಕಳಿಂದ ಎಲ್ ಇ ಡಿ ಬಲ್ಬ್ ದೂರವಿರಿಸಿ: ಆಟವಾಡುತ್ತಿದ್ದಾಗ ಎಲ್‌ಇಡಿ ಬಲ್ಬ್ ನುಂಗಿದ 8 ತಿಂಗಳ ಮಗು!

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂಟು ತಿಂಗಳ ಮಗು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಎಲ್‌ಇಡಿ ಬಲ್ಬ್ ನುಂಗಿದ ಘಟನೆ ನಡೆದಿದ್ದು, ಪೋಷಕರ ಸಮಯೋಚಿತ ನಿರ್ಧಾರ ಮತ್ತು ವೈದ್ಯರ ತ್ವರಿತ ಚಿಕಿತ್ಸೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಮಾಹಿತಿಯ ಪ್ರಕಾರ, ಮನೆಯಲ್ಲೇ ಆಟವಾಡುತ್ತಿದ್ದ ವೇಳೆ ಮಗು ಸಣ್ಣ ಗಾತ್ರದ ಎಲ್‌ಇಡಿ ಬಲ್ಬ್ ಅನ್ನು ಬಾಯಿಗೆ ಹಾಕಿಕೊಂಡು ನುಂಗಿದೆ. ಬಳಿಕ ಮಗು ನಿರಂತರವಾಗಿ ಅಳಲಾರಂಭಿಸಿದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಆರೋಗ್ಯ ಪರೀಕ್ಷಿಸಿ ಎಕ್ಸ್‌-ರೇ ನಡೆಸಿದಾಗ ಗಂಟಲಿನಲ್ಲಿ ಲೋಹದ ವಸ್ತು ಸಿಲುಕಿರುವುದು ಪತ್ತೆಯಾಯಿತು. ನಂತರ ಲ್ಯಾರಿಂಗೋಸ್ಕೋಪ್ ಪರೀಕ್ಷೆಯಲ್ಲಿ ಅದು ಎಲ್‌ಇಡಿ ಬಲ್ಬ್ ಎಂಬುದು ದೃಢಪಟ್ಟಿತು.

ಇಎನ್‌ಟಿ ತಜ್ಞೆ ಡಾ. ರಾಜಶ್ರೀ ಅವರ ನೇತೃತ್ವದ ವೈದ್ಯರ ತಂಡ ಯಾವುದೇ ಶಸ್ತ್ರಚಿಕಿತ್ಸೆ ನಡೆಸದೆ ವಿಶೇಷ ವೈದ್ಯಕೀಯ ಉಪಕರಣಗಳ ಸಹಾಯದಿಂದ ಬಲ್ಬ್ ಅನ್ನು ಸುರಕ್ಷಿತವಾಗಿ ಹೊರತೆಗೆದಿದೆ. ಚಿಕಿತ್ಸೆ ಬಳಿಕ ಮಗು ಆರೋಗ್ಯವಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಚೇತರಿಸಿಕೊಳ್ಳುತ್ತಿದೆ.

ಈ ಕುರಿತು ವೈದ್ಯರು, ಮಕ್ಕಳ ಕೈಗೆ ಸಣ್ಣ ಗಾತ್ರದ ವಸ್ತುಗಳು, ಬ್ಯಾಟರಿಗಳು, ಬಲ್ಬ್‌ಗಳು, ನಾಣ್ಯಗಳು ಹಾಗೂ ಇತರ ಅಪಾಯಕಾರಿ ವಸ್ತುಗಳು ಸಿಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಮಕ್ಕಳು ಯಾವುದೇ ವಸ್ತುವನ್ನು ನುಂಗಿರುವ ಅನುಮಾನ ಬಂದರೆ ಮನೆಯಲ್ಲೇ ಚಿಕಿತ್ಸೆ ನೀಡಲು ಪ್ರಯತ್ನಿಸದೆ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.