ಮೇ 12ರಂದು ಪಲಿಮಾರು ಶ್ರೀಗಳ ಉತ್ತರಾಧಿಕಾರಿಯಾಗಿ ಶೈಲೇಶ್ ಉಪಾಧ್ಯಾಯ ಶಿಷ್ಯ ಸ್ವೀಕಾರ

ಉಡುಪಿ: ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಿದ್ದು, ಪಲಿಮಾರು ಮೂಲ ಮಠದಲ್ಲಿರುವ ಯೋಗ ದೀಪಿಕಾ ಗುರುಕುಲದ ವಿದ್ಯಾರ್ಥಿ ಶೈಲೇಶ್ ಉಪಾಧ್ಯಾಯ ಅವರು ಮಠದ 31 ಉತ್ತರಾಧಿಕಾರಿಯಾಗಿ ಮೇ 12ರಂದು ಶಿಷ್ಯ ಸ್ವೀಕಾರ ಮಾಡಲಿದ್ದಾರೆ.

ಕೊಡವೂರು ಕಂಬಳಕಟ್ಟ ಮೂಲದ ವಿದ್ಯಾರ್ಥಿ ಶೈಲೇಶ್ ಉಪಾಧ್ಯಾಯ ಅವರು ಪಲಿಮಾರು ಯೋಗ ದೀಪಿಕಾ ಗುರುಕುಲದಲ್ಲಿ ನಾಲ್ಕನೇ ವರ್ಷದ ವೇದಾಧ್ಯಯನ ಮಾಡುತ್ತಿದ್ದು, ಸನ್ಯಾಸ ಸ್ವೀಕಾರದ ಬಳಿಕ ಪಲಿಮಾರು ಶ್ರೀಗಳಲ್ಲಿ ಉನ್ನತ ಅಧ್ಯಯನ ಮುಂದುವರಿಸಲಿದ್ದಾರೆ.

ಶಿಬರೂರಿನಲ್ಲಿ 1956ರಲ್ಲಿ ಜನಿಸಿದ ಪಲಿಮಾರು ಸ್ವಾಮೀಜಿಯವರಿಗೆ ಪ್ರಸಕ್ತ 63 ವರ್ಷವಾಗಿದ್ದು, ತಮ್ಮ ಎರಡನೇ ಪರ್ಯಾಯ ಅವಧಿಯಲ್ಲಿ ಶಿಷ್ಯ ಸ್ವೀಕಾರ ಮಾಡುತ್ತಿದ್ದಾರೆ. 1974ರಲ್ಲಿ ವಿದ್ಯಾಮಾನ್ಯ ತೀರ್ಥರ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾಧೀಶ ಸ್ವಾಮೀಜಿ ಸನ್ಯಾಸ ಸ್ವೀಕರಿಸಿದ್ದರು. ಅನೇಕ ಜನಪರ ಯೋಜನೆಗಳ ಮೂಲಕ ಅವರು ಹೆಸರು ಮಾಡಿದ್ದಾರೆ.