ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ‍್ಯಾಲಿಯಲ್ಲಿ ಗುಂಡಿನ ದಾಳಿ: ಓರ್ವ ಮೃತ 9 ಮಂದಿ ಗಾಯಾಳು

ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಜೀರಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಶಂಕಿತನೊಬ್ಬ ಗುಂಡಿನ ದಾಳಿ ನಡೆಸಿದ್ದು, ಇಮ್ರಾನ್ ಖಾನ್ ಮತ್ತು ಅವರ ಕೆಲವು ಬೆಂಬಲಿಗರಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ನವೆಂಬರ್ 3ರಂದು ವಜೀರಾಬಾದ್ ನ ಝಫರ್ ಅಲಿ ಚೌಕ್ ನಲ್ಲಿ ‘ನೈಜ ಸ್ವಾತಂತ್ರ್ಯ’ ರ‍್ಯಾಲಿಯಲ್ಲಿ ಕಂಟೈನರ್ ಟ್ರಕ್ ನಲ್ಲಿ ಭಾಷಣ ಮಾಡುತ್ತಿದ್ದ ಇಮ್ರಾನ್ ಮೇಲೆ ಬುಲೆಟ್ ಶಾಟ್‌ಗಳನ್ನು ಹಾರಿಸಲಾಗಿದ್ದು, ಈ ಸಮಯದಲ್ಲಿ ಅವರ ಕಾಲಿಗೆ ಬುಲೆಟ್ ತಾಗಿದ್ದು, ಗಾಯವಾಗಿದೆ.

ಘಟನೆ ಬಳಿಕ ಮಾತನಾಡಿದ ಇಮ್ರಾನ್ ದೇವರ ದಯದಿಂದ ನನಗೆ ಇನ್ನೊಂದು ಜೀವನ ಸಿಕ್ಕಿದೆ ಎಂದಿದ್ದಾರೆ. ಗುಂಡಿನ ದಾಳಿಯಿಂದಾಗಿ ಸಭೆಯಲ್ಲಿ ಗೊಂದಲವನ್ನು ಉಂಟಾಗಿದೆ ಮತ್ತು ನೂಕು ನುಗ್ಗಲಿನಿಂದಾಗಿ ಅನೇಕ ಜನರು ಗಾಯಗೊಂಡಿದ್ದಾರೆ ಎಂದು ಡೈಲಿ ಟೈಮ್ಸ್ ವರದಿ ಮಾಡಿದೆ.

ಇಮ್ರಾನ್ ಖಾನ್ ಅವರನ್ನು ಶೌಕತ್ ಖಾನಮ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.