ಆಂಧ್ರಪ್ರದೇಶದ ರಾಮತೀರ್ಥಕ್ಷೇತ್ರಕ್ಕೆ ಪೇಜಾವರ ಶ್ರೀ ಭೇಟಿ: ರಾಮದೇವರ ವಿಗ್ರಹ ಧ್ವಂಸಗೊಳಿಸಿದ ಕಿಡಿಗೇಡಿಗಳ ಬಂಧನಕ್ಕೆ ಶ್ರೀಗಳ ಆಗ್ರಹ

ಉಡುಪಿ: ಕಳೆದ 20 ದಿನಗಳ ಹಿಂದೆ ದುಷ್ಕರ್ಮಿಗಳಿಂದ ವಿರೂಪಗೊಂಡ ಸುಮಾರು 600 ವರ್ಷಗಳ ಇತಿಹಾಸವುಳ್ಳ ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ರಾಮತೀರ್ಥಕ್ಷೇತ್ರಮ್ ನ ಶ್ರೀರಾಮಮಂದಿರಕ್ಕೆ ಅಯೋಧ್ಯೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರು ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ‌ ಇಂದು ಭೇಟಿ ನೀಡಿದರು.

ಶ್ರೀರಾಮ ದೇಗುಲದಲ್ಲಿದ್ದ ರಾಮದೇವರ ವಿಗ್ರಹದ ತಲೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ಸರೋವರಕ್ಕೆ ಎಸೆದಿರುವ ಘಟನೆಗೆ ಶ್ರೀಗಳು ತೀವ್ರ ಖಂಡನೆ ವ್ಯಕ್ತಪಡಿಸಿದರು.

ಅಲ್ಲದೆ, ಆಂಧ್ರ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ದುಷ್ಕೃತ್ಯ ನಡೆಸಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ದೇಗುಲದ ಭದ್ರತೆಗೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ಪೊಲೀಸರೊಂದಿಗೆ ಶ್ರೀಗಳು ಸಮಾಲೋಚನೆ ನಡೆಸಿದರು. ದೇಗುಲಕ್ಕೆ ಸಿಸಿಟಿವಿ ಅಳವಡಿಸಿ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದರು.