ಉಚ್ಚಿಲ ದಸರಾ: ಅ. 22 ರಂದು ಮಹಾಲಕ್ಷ್ಮಿ ಕೋ-ಆಪರೇಟಿವ್​ ಬ್ಯಾಂಕ್​ ವತಿಯಿಂದ ‘ನಾಡಹಬ್ಬ ದಸರಾ’ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ

ಉಡುಪಿ: ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದ ಸಹಯೋಗದೊಂದಿಗೆ, ಮಹಾಲಕ್ಷ್ಮಿ ಕೋ-ಆಪರೇಟಿವ್​ ಬ್ಯಾಂಕ್​ ವತಿಯಿಂದ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಅ. 22 ರಂದು ಬೆಳಗ್ಗೆ 9.30ಕ್ಕೆ ಉಚ್ಚಿಲ ಮೊಗವೀರ ಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಯಶ್​ಪಾಲ್​ ಸುವರ್ಣ ಹೇಳಿದ್ದಾರೆ.

‘ನಾಡಹಬ್ಬ ದಸರಾ’ ಈ ವಿಷಯದ ಕುರಿತು ಸ್ಪರ್ಧಿಗಳು ಚಿತ್ರ ಬಿಡಿಸಬೇಕಾಗಿದ್ದು, ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಕಿರಿಯರ ವಿಭಾಗ (1 ರಿಂದ 4ನೇ ತರಗತಿ), ಪ್ರಾಥಮಿಕ ವಿಭಾಗ ( 5 ರಿಂದ 7 ನೇ ತರಗತಿ), ಹೈಸ್ಕೂಲ್​ ವಿಭಾಗ ( 8 ರಿಂದ 10ನೇ ತರಗತಿ), ಕಾಲೇಜು ವಿಭಾಗ (ಪದವಿ ಪೂರ್ವ ಮತ್ತು ಪದವಿ ತರಗತಿ) ಹಾಗೂ ಸಾರ್ವಜನಿಕ ವಿಭಾಗದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧಾಳುಗಳಿಗೆ ಡ್ರಾಯಿಂಗ್​ ಶೀಟ್​ ಸ್ಥಳದಲ್ಲೇ ಒದಗಿಸಲಾಗುವುದು. ಉಳಿದ ಪರಿಕರಗಳನ್ನು ಅವರೇ ತರಬೇಕು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವೀತಿಯ, ತೃತೀಯ ಹಾಗೂ 3 ಸಮಾಧಾನಕರ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡಲಾಗುವುದು. ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9972120332, 9686124769 ಸಂಪರ್ಕಿಸಬಹುದು.