ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಓರಿಯಂಟೇಶನ್ ಡೇ ಕಾರ್ಯಕ್ರಮ

ಮಣಿಪಾಲ: ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಗೀತ ಅಕಾಡೆಮಿಯನ್ನು ಪ್ರಾರಂಭಿಸುವ ಹಂತದಲ್ಲಿದೆ ಎಂದು ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಹೇಳಿದರು.

ಅವರು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ತನ್ನ ಹೊಸ ವಿದ್ಯಾರ್ಥಿಗಳಿಗಾಗಿ
ಆಯೋಜಿಸಿದ್ದ ಓರಿಯಂಟೇಶನ್ ಡೇ-2022 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಲಾ ಅಧ್ಯಯನ ವಿಶ್ವವಿದ್ಯಾಲಯದ ಅಂತಸತ್ವವಾಗಿದ್ದು, ಅದಿಲ್ಲದೆ ಶೈಕ್ಷಣಿಕ ಜೀವನವು ತುಂಬಾ ಯಾಂತ್ರಿಕವಾಗುತ್ತದೆ ಎಂದರು.

ಮಣಿಪಾಲ ಸಂಸ್ಥೆಗಳ ಪ್ರಾರಂಭದ ಹಂತದಲ್ಲಿ ಅಂತರ ಶಿಕ್ಷಣ ಶಾಖೀಯತೆ ಉದಯವಾಗಿತ್ತು ಆದರೆ ಪ್ರಸ್ತುತ
ಕಲಾ ಅಧ್ಯಯನದ ಸೇರ್ಪಡೆಯೊಂದಿಗೆ ಹೆಚ್ಚು ಹೆಚ್ಚು ಬಹು ಶಿಕ್ಷಣ ಶಾಖೀಯತೆಯನ್ನು ಅಳವಡಿಸಿಕೊಳ್ಳುತ್ತಿದೆ ಹಾಗೂ ಬಹು ಶಿಕ್ಷಣ ಶಾಖೆಯ ಸಂಶೋಧನೆಯ ಅಗತ್ಯತೆಯನ್ನು ಕಂಡುಕೊಳ್ಳುತ್ತಿದೆ ಎಂದರು.

ಗೌರವ ಅತಿಥಿಗಳಾಗಿ ಆಗಮಿಸಿದ್ದ ಕರ್ನಲ್ ಪ್ರಕಾಶ್ ಚಂದ್ರ ಮಾತನಾಡಿ, ಸಂಘರ್ಷ ಪೀಡಿತ ಜಗತ್ತಿನಲ್ಲಿ ಶಾಂತಿ ಎಂಬುದು ಬಹು ಬೇಡಿಕೆಯ ಕನಸಾಗಿದೆ. ಮಹಾತ್ಮಾ ಗಾಂಧಿಯವರ ತತ್ವಗಳನ್ನು ನೆನೆಯುವುದರೊಂದಿಗೆ ಸಂಘರ್ಷ ಪರಿಹಾರದ ಕಡೆಗೆ ನಿರಂತರವಾದ ಅಹಿಂಸಾತ್ಮಕ ಪ್ರಯತ್ನಗಳು ನಡೆಯಬೇಕು ಎಂದರು.

ಇನ್ನೋರ್ವ ಅತಿಥಿ ಡಾ. ಶಶಿರಶ್ಮಿ ಆಚಾರ್ಯ ಮಾತನಾಡಿ, ಕಲೆ ಶಾಂತಿಯ ಮಾಧ್ಯಮವಾಗಬಲ್ಲದು. ಶಾಂತರಸದ ಕಲ್ಪನೆಯೇ ಶಾಂತಿಯನ್ನು ಸೌಂದರ್ಯಶಾಸ್ತ್ರದೊಂದಿಗೆ ಬೆಸೆಯುವುದಾಗಿದೆ. ಈ ಕಲ್ಪನೆಯು ಜೀವನದ ಎಲ್ಲಾ ಹಂತಗಳಿಗೆ ವಿಸ್ತರಿಸಿ ವಸುಧೈವ ಕುಟುಂಬಕಂ ಮಂತ್ರ ಸಾಕಾರವಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಸಂಸ್ಥೆಯು ಅಂತರ್ ಶಿಸ್ತೀಯ ಶಿಕ್ಷಣಕ್ಕೆ ಪ್ರಾತಿನಿಧ್ಯವನ್ನು ನೀಡುತ್ತಾ ಪರಿಸರ ವಿಜ್ಞಾನ, ಸೌಂದರ್ಯಶಾಸ್ತ್ರ, ಶಾಂತಿ ಅಧ್ಯಯನ ಮತ್ತು ಮಾಧ್ಯಮ ಕ್ಷೇತ್ರಗಳಿಗೆ ಒತ್ತು ನೀಡುತ್ತದೆ ಎಂದರು.

ಎಂಐಟಿ ಜಂಟಿ ನಿರ್ದೇಶಕ ಡಾ.ಸೋಮಶೇಖರ್ ಭಟ್, ಪ್ರೊ.ಫಣಿರಾಜ್, ವಿಧುಷಿ ಭ್ರಮರಿ ಶಿವಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

ಹೊಸ ವಿದ್ಯಾರ್ಥಿಗಳಿಗೆ ಮಣಿಪಾಲ ಮತ್ತು ಜಿಸಿಪಿಎಎಸ್‌ನ ಕುರಿತು ಹಿರಿಯ ವಿದ್ಯಾರ್ಥಿಗಳು ಸಂಗೀತ, ನೃತ್ಯದೊಂದಿಗೆ ಮತ್ತು ವಿಷಯ ಪ್ರಸ್ತುತಿಯ ಮೂಲಕ ಪರಿಚಯಿಸಿದರು. ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.