ಮೋರ್ಬಿ: 130 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೋರ್ಬಿ ತೂಗು ಸೇತುವೆ ದುರಂತದ ತನಿಖೆಯಲ್ಲಿ ಸೇತುವೆಯ ನವೀಕರಣದ ಜವಾಬ್ದಾರಿ ಹೊತ್ತ ಒರೆವಾ ಕಂಪನಿಯು ಮಂಜೂರಾದ 2 ಕೋಟಿ ರೂ.ಗಳಲ್ಲಿ ಕೇವಲ 12 ಲಕ್ಷ ರೂಗಳನ್ನು ಮಾತ್ರ ಖರ್ಚುಮಾಡಿದೆ ಎಂದು ಬಹಿರಂಗವಾಗಿದೆ.
ಕಂಪನಿಯು ನವೀಕರಣದ ಗುತ್ತಿಗೆಯನ್ನು ಹೇಗೆ ಪಡೆದುಕೊಂಡಿದೆ ಮತ್ತು ಬ್ರಿಟಿಷರ ಕಾಲದ ಸೇತುವೆಯನ್ನು ಬಲಪಡಿಸಲು ಮಂಜೂರಾದ ಹಣದಲ್ಲಿ ಕೇವಲ ಒಂದು ಭಾಗವನ್ನು ಹೇಗೆ ಖರ್ಚು ಮಾಡಿದೆ ಎನ್ನುವುದನ್ನು ಪೊಲೀಸ್ ತನಿಖೆಯು ಬಹಿರಂಗಪಡಿಸಿದೆ.
ಅಜಂತಾದ ಅಂಗಸಂಸ್ಥೆಯಾಗಿರುವ ಅಹಮದಾಬಾದ್ ಮೂಲದ ಒರೆವಾ ಸಮೂಹವು ಮೊರ್ಬಿಯಲ್ಲಿನ ವಸಾಹತುಶಾಹಿ ಯುಗದ ತೂಗು ಸೇತುವೆಯ ನವೀಕರಣ ಮತ್ತು ದುರಸ್ತಿಯ ಗುತ್ತಿಗೆ ವಹಿಸಿಕೊಂಡಿತ್ತು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕಂಪನಿಯು ಕೇವಲ ಮೇಲ್ಮೈನ ಅಲಂಕಾರಿಕ ನವೀಕರಣವನ್ನಷ್ಟೇ ಮಾಡಿದೆ ಮತ್ತು ನಿಗದಿಪಡಿಸಿದ ಒಟ್ಟು ಮೊತ್ತದ 6% ಅನ್ನು ಮಾತ್ರ ಖರ್ಚು ಮಾಡಿದೆ. ಸೇತುವೆಯನ್ನು ಬಲಪಡಿಸಲು ಬೇಕಾದ ಯಾವುದೇ ಕಾರ್ಯಗಳನ್ನು ಸಂಸ್ಥೆಯು ಮಾಡಿಲ್ಲವೆಂಬುದು ವಿಧಿವಿಜ್ಞಾನ ತನಿಖೆಯಿಂದ ಬಯಲಾಗಿದೆ.
ತನಿಖೆಯು ಒರೆವಾ ಗ್ರೂಪ್‌ನ ಹಲವಾರು ಅಕ್ರಮಗಳನ್ನು ಎತ್ತಿ ತೋರಿಸಿದೆ. ಸೇತುವೆ ನವೀಕರಣದ ಉಪ-ಗುತ್ತಿಗೆ ಪಡೆದ ಸಂಸ್ಥೆ, ಸೇತುವೆಯನ್ನು ಸರಿಪಡಿಸುವ ಜವಾಬ್ದಾರಿಯನ್ನು ಧ್ರಂಗಾಧ್ರ ಮೂಲದ ಸಂಸ್ಥೆಯಾದ ದೇವಪ್ರಕಾಶ್ ಸೊಲ್ಯೂಷನ್‌ಗೆ ನೀಡಿತ್ತು. ಒರೆವಾದಂತೆಯೆ ಉಪಗುತ್ತಿಗೆದಾರರು ಕೂಡಾ ಇಂತಹ ಕೆಲಸಕ್ಕೆ ಅಗತ್ಯವಾದ ತಾಂತ್ರಿಕ ಜ್ಞಾನದ ಕೊರತೆಯನ್ನು ಹೊಂದಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಎಂಟರಿಂದ ಹನ್ನೆರಡು ತಿಂಗಳವರೆಗೆ ನಿರ್ವಹಣಾ ಕೆಲಸಕ್ಕೆ ಹೂಡಿಕೆ ಮಾಡಬೇಕಾಗಿತ್ತು. ಆದಾಗ್ಯೂ, ಗುಂಪು ಈ ನಿಯಮಗಳನ್ನು ಉಲ್ಲಂಘಿಸಿತ್ತು ಮತ್ತು ಮೋರ್ಬಿ ನಾಗರಿಕಾ ಸಂಸ್ಥೆಗೆ ತಿಳಿಸದೆ ಏಳು ತಿಂಗಳೊಳಗೆ ಸೇತುವೆಯನ್ನು ಪುನಃ ತೆರೆದಿತ್ತು. ದೇವಪ್ರಕಾಶ್ ಸೊಲ್ಯೂಷನ್ಸ್‌ನಿಂದ ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಸೇತುವೆ ದುರಸ್ತಿಗೆ ಖರ್ಚು ಮಾಡಿದ ಹಣವನ್ನು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.