ಒಂದು ಕುಟುಂಬಕ್ಕೆ ಒಂದೇ ಗ್ಯಾಸ್, ಗಮನಿಸಿ ಇಂದಿನಿಂದ ಬದಲಾಗಿದೆ LPG ನಿಯಮಗಳು

ನವದೆಹಲಿ: ದೇಶದಾದ್ಯಂತ ಎಲ್ಪಿಜಿ (LPG) ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿಯಮವೊಂದನ್ನು ಜಾರಿಗೆ ತಂದಿದ್ದು, ಇಂದಿನಿಂದ “ಒಂದು ಕುಟುಂಬಕ್ಕೆ ಒಂದೇ ಎಲ್ಪಿಜಿ ಸಂಪರ್ಕ” (One Household, One Connection) ನಿಯಮ ಕಡ್ಡಾಯವಾಗಿದೆ. ಗೃಹಬಳಕೆಯ ಗ್ಯಾಸ್ ಸಬ್ಸಿಡಿ ದುರ್ಬಳಕೆ ತಡೆದು, ಕಪ್ಪು ಮಾರುಕಟ್ಟೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ

ಹೊಸ ನಿಯಮದ ಅನ್ವಯ, ಪತಿ-ಪತ್ನಿ, ಅವಿವಾಹಿತ ಮಕ್ಕಳು ಹಾಗೂ ಅವಲಂಬಿತ ಪೋಷಕರನ್ನೊಳಗೊಂಡ ಒಂದು ಕುಟುಂಬಕ್ಕೆ ಕೇವಲ ಒಂದು ಎಲ್ಪಿಜಿ ಸಂಪರ್ಕ ಮಾತ್ರ ಮಾನ್ಯವಾಗಲಿದೆ. ಒಂದೇ ಕುಟುಂಬದ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕ ಹೊಂದಿರುವುದು ಕಾನೂನುಬಾಹಿರವೆಂದು ಪರಿಗಣಿಸಲಾಗಿದ್ದು, ಹೆಚ್ಚುವರಿ ಸಂಪರ್ಕಗಳನ್ನು ತಕ್ಷಣವೇ ಸರೆಂಡರ್ ಮಾಡುವಂತೆ ತೈಲ ಕಂಪನಿಗಳು ಸೂಚಿಸಿವೆ.

ದೇಶದ ಪ್ರಮುಖ ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮತ್ತು ಭಾರತ್ ಪೆಟ್ರೋಲಿಯಂ (BPCL) ಈಗಾಗಲೇ ಹೆಚ್ಚುವರಿ ಸಂಪರ್ಕಗಳ ಗುರುತಿಸುವ ಕಾರ್ಯವನ್ನು ಆರಂಭಿಸಿವೆ ಎನ್ನಲಾಗಿದೆ. ನಿಯಮ ಉಲ್ಲಂಘಿಸಿ ಹೆಚ್ಚುವರಿ ಸಂಪರ್ಕಗಳನ್ನು ಹೊಂದಿರುವ ಕುಟುಂಬಗಳ ಗ್ಯಾಸ್ ಸೇವೆಯನ್ನು ಸ್ಥಗಿತಗೊಳಿಸುವ ಅಧಿಕಾರ ಕಂಪನಿಗಳಿಗೆ ನೀಡಲಾಗಿದೆ. ಹೆಚ್ಚುವರಿ ಸಿಲಿಂಡರ್‌ಗಳನ್ನು ಹಿಂತಿರುಗಿಸಿದ ಬಳಿಕವೇ ಸೇವೆ ಮರುಪ್ರಾರಂಭವಾಗಲಿದೆ.

ಇನ್ನು ಪೈಪ್ಲೈನ್ ನೈಸರ್ಗಿಕ ಅನಿಲ (PNG) ಸಂಪರ್ಕ ಹೊಂದಿರುವ ಗ್ರಾಹಕರಿಗೂ ಹೊಸ ನಿಯಮ ಅನ್ವಯವಾಗಲಿದೆ. ಪಿಎನ್ಜಿ ಸಂಪರ್ಕ ಪಡೆದ 30 ದಿನಗಳೊಳಗೆ ಎಲ್ಪಿಜಿ ಸಂಪರ್ಕವನ್ನು ಸರೆಂಡರ್ ಮಾಡಬೇಕಾಗುತ್ತದೆ. ಆದರೆ ಭವಿಷ್ಯದಲ್ಲಿ ಅಗತ್ಯವಿದ್ದರೆ ಮರುಸಕ್ರಿಯಗೊಳಿಸಲು ‘ಟ್ರಾನ್ಸ್‌ಫರ್ ವೋಚರ್’ ಸೌಲಭ್ಯ ಒದಗಿಸಲಾಗಿದೆ.

ಹೆಚ್ಚುವರಿ ಸಂಪರ್ಕ ಸರೆಂಡರ್ ಮಾಡಿದ ಬಳಿಕ ಗ್ರಾಹಕರು ಡಬಲ್ ಬಾಟಲ್ ಕನೆಕ್ಷನ್ (DBC) ಸೌಲಭ್ಯ ಪಡೆಯಬಹುದಾಗಿದ್ದು, ಇದರಿಂದ ಒಂದು ಬ್ಯಾಕಪ್ ಸಿಲಿಂಡರ್ ಅನ್ನು ಕಾನೂನುಬದ್ಧವಾಗಿ ಹೊಂದಲು ಅವಕಾಶ ಸಿಗಲಿದೆ ಎಂದು ತಿಳಿಸಲಾಗಿದೆ.

ಸಬ್ಸಿಡಿ ಸೌಲಭ್ಯಗಳ ದುರ್ಬಳಕೆ ತಡೆದು, ನಿಜವಾದ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ಒದಗಿಸುವುದು, ಗೃಹಬಳಕೆಯ ಸಿಲಿಂಡರ್‌ಗಳ ಕಪ್ಪು ಮಾರುಕಟ್ಟೆ ನಿಯಂತ್ರಿಸುವುದು ಹಾಗೂ ಪರಿಸರ ಸ್ನೇಹಿ ಪಿಎನ್ಜಿ ಬಳಕೆಯನ್ನು ಉತ್ತೇಜಿಸುವುದು ಸರ್ಕಾರದ ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ಹೆಚ್ಚುವರಿ ಸಂಪರ್ಕ ಹೊಂದಿರುವ ಗ್ರಾಹಕರು ದಂಡ ಅಥವಾ ಸೇವಾ ಸ್ಥಗಿತದ ಸಮಸ್ಯೆ ಎದುರಿಸುವ ಮುನ್ನವೇ ತಮ್ಮ ಸ್ಥಳೀಯ ಗ್ಯಾಸ್ ವಿತರಕರನ್ನು ಸಂಪರ್ಕಿಸಿ ಸಂಪರ್ಕವನ್ನು ಸರೆಂಡರ್ ಮಾಡುವಂತೆ ತೈಲ ಕಂಪನಿಗಳು ಮನವಿ ಮಾಡಿವೆ. ಈ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೂ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.