ಕಾರ್ಕಳದ ಈ ಬ್ಯಾಂಕ್ ಉದ್ಯೋಗಿಗೆ ಓಲ್ಡ್ ಇಸ್ ಗೋಲ್ಡ್: ಹಳೆ ವಸ್ತುಗಳಿಗಾಗಿ ಊರೂರಿಗೆ ಹೋಗ್ತಾರೆ, ಅದ್ರಲ್ಲೇ ಖುಷಿ ಪಡ್ತಾರೆ

ಉತ್ತಮ ಹವ್ಯಾಸಗಳು ನಮ್ಮ ದಿನನಿತ್ಯದ ಜೀವನ ಶೈಲಿಯ ಭಾಗವಾಗಿದೆ. ಒತ್ತಡದ ಬದುಕಿಗೆ ನೆಮ್ಮದಿಯ ಆಹ್ಲಾದಕರ ಹವ್ಯಾಸ ನಮಗೆ ಖುಷಿ ಕೊಡುತ್ತದೆ. ಇಲ್ಲೊಬ್ಬರಿದ್ದಾರೆ ನೋಡಿ ಇವರಿಗೆ ಓಲ್ಡ್ ಇಸ್ ಗೋಲ್ಡ್. ಕಾರ್ಕಳ ತಾಲೂಕಿನ ಹಜಂಕಬೆಟ್ಟುವಿನ ಕೆ.ಮಂಜುನಾಥ್ ಮೂಲತಃ ಬ್ಯಾಂಕ್ ಉದ್ಯೋಗಿ . ಬ್ಯಾಂಕ್ ಉದ್ಯೋಗದ ಜೊತೆಗೆ ಪುರಾತನ ನೂರಾರುವರ್ಷಗಳ ಹಿಂದಿನ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವಿಶಿಷ್ಟ ಹವ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಇವರ ಬಳಿ ಹಳೆಯ ಕಾಲದ ನಾಣ್ಯಗಳು ಸುಮಾರು 25 ಸಾವಿರಕ್ಕೂ ಮಿಕ್ಕಿ ಇದೆ ಅಂದರೆ ನಂಬಲೇಬೇಕು.

ಐತಿಹಾಸಿಕ ಕತೆ ಹೇಳುವ ನಾಣ್ಯಗಳು:

ಮೊಘಲ್, ಬಾಬರ್,ಕುಶಾಣ, ಅಲ್ಲಾವುದ್ದಿನ್ ಖಿಲ್ಜಿ, ಟಿಪ್ಪು ಕಾಲದ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಮೈಸೂರು ಸಂಸ್ಥಾನದ ಬಂಗಾರದ ನಾಣ್ಯಗಳು, ಈಸ್ಟ್ ಇಂಡಿಯಾ ಕಂಪೆನಿಯ ಬೆಳ್ಳಿ ನಾಣ್ಯಗಳು, ಮೈಸೂರು ಸಂಸ್ಥಾನದ ಠಸ್ಸೇ ಪೇಪರ್ ಗಳು, ಹಳೆಯ ಬೆಳ್ಳಿನಾಣ್ಯಗಳನ್ನು ನೋಡುತ್ತಿದ್ದಂತೆಯೇ ಮನಸ್ಸು ಎಷ್ಟೋ ವರ್ಷದ ಹಿಂದಕ್ಕೋಡುತ್ತದೆ. ಆರ್.ಬಿ.ಐ.ನಿಂದ ಮುದ್ರಣಗೊಂಡ, ವಿರೂಪಗೊಂಡ, ದೋಷ ಪೂರಿತ ಅಪರೂಪದ ನಾಣ್ಯಗಳೂ ಇವರಲ್ಲುಂಟು. ದೇಶದ ಪ್ರತಿಷ್ಠಿತ ಸೇನಾ ಪದಕಗಳು, ರಾಜರ ಕತ್ತಿಗಳು ,ತುಳುನಾಡಿನ ಗರಡಿ ಮನೆಯ ಆಯುಧಗಳು, ಮರದ ವಸ್ತುಗಳು, ಹಳೆಯಕಾಲದ ಕುರ್ಚಿಗಳು ,ಪೆಂಡ್ಯೂಲಂ ಗಡಿಯಾರಗಳು, ರಥದ ಚಕ್ರಗಳು, ತಾವ್ರದ ಪಾತ್ರೆಗಳು, ಪಿಕದಾನಿ, ಹಳೆಕಾಲದ ಮುದ್ರೆಗಳು, ನೋಟುಗಳು,  ಅಂಚೆ ಚೀಟಿ ಸಂಗ್ರಹಣೆ ವಿದೇಶಿ ನಾಣ್ಯಗಳು ನೋಡಿದರೆ ಕಾಡಿಯೇಬಿಡುತ್ತದೆ.
ಮಂಜುನಾಥ್ ರವರ ಹವ್ಯಾಸಿ ಬದುಕಿಗೆ ಪತ್ನಿ ತಂದೆತಾಯಿ ಮೂಲ ಪ್ರೇರಣೆಯಂತೆ. ಕಳೆದ ಇಪ್ಪತ್ನನಾಲ್ಕು ವರ್ಷದಿಂದ ಹವ್ಯಾಸಿ ಬದುಕನ್ನು ರೂಪಿಸಿಕೊಂಡಿರುವ ಇವರ ಹವ್ಯಾಸಕ್ಕೆ ಗೆಳೆಯ ಸಾಥ್ ಕೂಡ ಇದೆ. ಇವರು ಹಳೆಯ ವಸ್ತುಗಳನ್ನು ದೇಶದಾದ್ಯಂತ ಸಂಚರಿಸಿ, ಖರೀದಿಸಿ ಮನೆಗೆ ತಂದು ಮಗುವಿನಂತೆ ಸಲಹುತ್ತಿದ್ದಾರೆ.
“ಪುರಾತನ ವಸ್ತುಗಳನ್ನು ಸಂಗ್ರಹಿಸುವುದರಿಂದ ಮನಸ್ಸಿಗೆ ಚೈತನ್ನ ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ.  ಹಳೆಯ ವಸ್ತುಗಳನ್ನು ಮುಂದಿನ ಪೀಳಿಗೆಗೆಗಾಗಿ ನೀಡುವ ಉದ್ದೇಶ ನನ್ನದು ಎನ್ನುವುದು ಮಂಜುನಾಥರ ಮಾತು

*ರಾಮ್ ಅಜೆಕಾರ್