ನಮ್ಮ ಆರ್ಥಿಕ ಹಿತಾಸಕ್ತಿ ರಕ್ಷಣೆಗಾಗಿ ರಷ್ಯಾದಿಂದ ತೈಲ ಖರೀದಿ – ಅಮೆರಿಕಕ್ಕೆ ಭಾರತ ತಿರುಗೇಟು

ನವದೆಹಲಿ: ನಮ್ಮ ವಾಣಿಜ್ಯ, ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ರಷ್ಯಾದಿಂದ(Russia) ತೈಲವನ್ನು ಖರೀದಿ ಮಾಡುತ್ತಿದ್ದೇವೆ ಎಂದು ಅಮೆರಿಕಕ್ಕೆ(USA) ಭಾರತ ತಿರುಗೇಟು ನೀಡಿದೆ.

ರಷ್ಯಾದಿಂದ ಇಂಧನ ಖರೀದಿಸುವ ದೇಶಗಳ ಮೇಲೆ ಶೇ.100 ರಷ್ಟು ಆಮದು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅಧಿಕಾರ ನೀಡುವ ಮಸೂದೆಯನ್ನು ಅಮೆರಿಕ ಸಂಸತ್ತು ಅಂಗೀಕರಿಸಿದ ಬೆನ್ನಲ್ಲೇ ತನ್ನ 140 ಕೋಟಿ ಜನರ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಬದ್ಧವಾಗಿದೆ ಎಂದು ಭಾರತ(India) ದೃಢವಾಗಿ ಪುನರುಚ್ಚರಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಅಮೆರಿಕ ಕಾಂಗ್ರೆಸ್ ಅಂಗೀಕರಿಸಿರುವ ‘ರಷ್ಯಾ ಮತ್ತು ಇರಾನ್ ನಿರ್ಬಂಧಗಳ ಕಾಯ್ದೆ-2026’ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಹಿಂದೆಯೂ ಹಲವು ಬಾರಿ ಸ್ಪಷ್ಟಪಡಿಸಿದಂತೆ, ದೇಶದ 140 ಕೋಟಿ ಜನರ ಇಂಧನ ಭದ್ರತೆಯನ್ನು ಕಾಪಾಡಲು ಭಾರತ ಬದ್ಧವಾಗಿದೆ. ಬದಲಾಗುತ್ತಿರುವ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ, ವಿವಿಧ ಮೂಲಗಳಿಂದ ಕಚ್ಚಾತೈಲ ಖರೀದಿಸುವ ಮೂಲಕ ತನ್ನ ಇಂಧನ ಅಗತ್ಯವನ್ನು ಭಾರತ ಪೂರೈಸಿಕೊಳ್ಳುವುದನ್ನು ಮುಂದುವರಿಸಲಿದೆ” ಎಂದು ಸಚಿವಾಲಯ ತಿಳಿಸಿದೆ.

ರಷ್ಯಾದೊಂದಿಗೆ ಭಾರತ ನಡೆಸುತ್ತಿರುವ ತೈಲ ವ್ಯಾಪಾರದ ಕುರಿತು ಕಳೆದ ಕೆಲ ತಿಂಗಳುಗಳಿಂದ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ನಿರ್ಧಾರವು ಕೇವಲ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧದ ಮೇಲಷ್ಟೇ ಅಲ್ಲದೆ, ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಬೀರಬಹುದಾದ ಪರಿಣಾಮಗಳನ್ನು ಭಾರತ ಸ್ಪಷ್ಟವಾಗಿ ವಿವರಿಸಿದೆ.

ದೇಶದ ವ್ಯಾಪಾರ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಭಾರತ ಬದ್ಧವಾಗಿದೆ. ಅಮೆರಿಕದ ಈ ನಿರ್ಧಾರದಿಂದ ಎದುರಾಗಬಹುದಾದ ಯಾವುದೇ ಪರಿಣಾಮಗಳನ್ನು ಎದುರಿಸಲು ಸರ್ಕಾರವು ದೇಶೀಯ ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಸ್ತುತ ಭಾರತವು ಸಮುದ್ರ ಮಾರ್ಗದ ಮೂಲಕ ರಷ್ಯಾದಿಂದ ಅತಿ ಹೆಚ್ಚು ಕಚ್ಚಾತೈಲ ಆಮದು ಮಾಡಿಕೊಳ್ಳುವ ದೇಶವಾಗಿದೆ. ಆದಾಗ್ಯೂ, ಸಂಭಾವ್ಯ ಬಿಕ್ಕಟ್ಟನ್ನು ತಪ್ಪಿಸಲು ಭಾರತೀಯ ತೈಲ ಸಂಸ್ಕರಣಾಗಾರಗಳು ಈಗಾಗಲೇ ಅಮೆರಿಕ, ಬ್ರೆಜಿಲ್, ಕೆನಡಾ, ವೆನೆಜುವೆಲಾ ಮತ್ತು ಆಫ್ರಿಕಾದ ದೇಶಗಳಿಂದ ಕಚ್ಚಾತೈಲ ಖರೀದಿಸಲು ಆರಂಭಿಸಿವೆ.