ಉಡುಪಿ: ಹೊರಿಝೇನ್ ಮೂವೀಸ್ ಬ್ಯಾನರ್ನಡಿ ನಿರ್ಮಿಸಲಾದ ‘ದೇವರು ಬೇಕಾಗಿದ್ದಾರೆ’ ಕನ್ನಡ ಚಲನಚಿತ್ರ ಅ. 11ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕೇಂಜ ಚೇತನ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರವನ್ನು ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ಇದಕ್ಕೆ 16 ಮಂದಿ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಕೋಲಾರ ಗುಡಿಬಂಡೆ, ಕೈವಾರ ವ್ಯಾಪ್ತಿಯಲ್ಲಿ 30 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು, ತನಗೆ ಬುದ್ಧಿ ಬಂದ ಬಳಿಕ ಅವರನ್ನು ಹುಡುಕಿಕೊಂಡು ಹೋಗುವ ಕಥಾಹಂದರ ಚಿತ್ರದಲ್ಲಿದೆ ಎಂದರು.
ಕಥೆಗೆ ಪೂರಕವಾಗಿ 5 ಹಾಡುಗಳನ್ನು ಚಿತ್ರಕ್ಕೆ ಒದಗಿಸಲಾಗಿದೆ. ಕರಾವಳಿ ಮಲ್ಟಿಪ್ಲೆಕ್ಸ್ ಸಹಿತ 33ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ. ಹೊಸ ಪ್ರತಿಭೆಗಳೇ ಚಿತ್ರದಲ್ಲಿದ್ದು, ಚಿತ್ರ ನೈಜವಾಗಿ ಮೂಡಿಬಂದಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮಾಸ್ಟರ್ ಅನೂಪ್, ನಟ ಸತ್ಯನಾಥ್, ಪೋಷಕ ನಟ ಅಶೋಕ್ ಶೆಟ್ಟಿ, ಛಾಯಾಗ್ರಾಹಕ ರುದ್ರಮುನಿ ಬೆಳೆಗೆರೆ, ನಿರ್ಮಾಪಕ ಕೃಷ್ಣಪ್ಪ ಉಪ್ಪೂರು ಉಪಸ್ಥಿತರಿದ್ದರು.












