ಮಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಭಾರೀ ಚರ್ಚೆ ಆಗುತ್ತಿರುವ ಸಂದರ್ಭದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಜನ ಮುಖ್ಯಮಂತ್ರಿಯಾಗಿದ್ದಾರೆ. ಈಗ ಬಿಜೆಪಿಯವರಿಗೆ ಅವಕಾಶ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈಗ ಕರ್ನಾಟಕದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲು ಎಸೆದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಗಳ ಹಿತದ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ. ಕಳೆದ ಎರಡು ವರ್ಷಗಳಿಂದಲೂ ಆ ಕಾಳಜಿ ಇರಲಿಲ್ಲ. ಈ ಹಿಂದೆ ಬಂದ ಪ್ರವಾಹದ ನಷ್ಟದ ಪರಿಹಾರವನ್ನೇ ಯಡಿಯೂರಪ್ಪ ಕೊಟ್ಟಿಲ್ಲ. ಉತ್ತರ ಕರ್ನಾಟಕದಲ್ಲಿ ಈಗ ಮಳೆಯಾಗಿ ತುಂಬಾ ಜನರಿಗೆ ಕಷ್ಟವಾಗಿದೆ. ಮನೆಗಳು ಬಿದ್ದು ಹೋಗಿದೆ, ಪ್ರಾಣಿಗಳು ಕೊಚ್ಚಿ ಹೋಗಿವೆ. ಈ ಸಂದರ್ಭ ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಈಗ ಮುಖ್ಯಮಂತ್ರಿ ಬದಲಾವಣೆ ಕಸರತ್ತು ನಡೆಯುತ್ತಿದೆ ಎಂದು ಕಿಡಿಕಾರಿದರು.