ನ.8: “ಜಬರ್ದಸ್ತ್ ಶಂಕರ್” ತುಳುಚಿತ್ರ ಬಿಡುಗಡೆ

ಉಡುಪಿ: ಜಲನಿಧಿ ಫಿಲಂಸ್‌ ನಿರ್ಮಾಣದ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ‘ಜಬರ್ದಸ್ತ್‌ ಶಂಕರ್‌’ ತುಳುಚಿತ್ರ ಇದೇ 8ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನ ಬಿಗ್‌ ಸಿನಿಮಾಸ್‌, ಪಿವಿಆರ್‌, ಸಿನಿಪೊಲಿಸ್‌ ಮಲ್ಟಿಪ್ಲೆಕ್ಸ್‌ಗಳು, ಉಡುಪಿಯ ಆಶೀರ್ವಾದ್‌, ಮಣಿಪಾಲದ ಐನಾಕ್ಸ್‌, ಬಿಗ್‌ ಸಿನಿಮಾಸ್‌, ಕಾರ್ಕಳದ ಪ್ಲಾನೆಟ್‌ ಸೇರಿದಂತೆ ಕರಾವಳಿಯ 14 ಕೇಂದ್ರಗಳು ಹಾಗೂ ವಿದೇಶಗಳಾದ ಒಮನ್‌, ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳ 14 ಕೇಂದ್ರಗಳು ಸೇರಿ ಒಟ್ಟು 28 ಕೇಂದ್ರಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದರು.
ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌ ಹಾಗೂ ರಾಜೇಶ್‌ ಕುಡ್ಲ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮಣಿಕಾಂತ್‌ ಕದ್ರಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಮಾಸ್‌ ಮಾದ ಸಾಹಸವಿದೆ. ಮುಖ್ಯಭೂಮಿಕೆಯಲ್ಲಿ ಅರ್ಜುನ್‌
ಕಾಪಿಕಾಡ್‌, ನೀತಾ ಅಶೋಕ್‌, ರಾಶಿ ಬಿ., ಸಾಯಿಕೃಷ್ಣ, ಸತೀಶ್‌ ಬಂದಲೆ ಮೊದಲಾದವರು‌ ಅಭಿನಯಿಸಿದ್ದಾರೆ. ಕತೆ, ಚಿತ್ರಕತೆ, ಸಾಹಿತ್ಯ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ನಾನು ವಹಿಸಿಕೊಂಡಿದ್ದೇನೆ ಎಂದು ತಿಳಿಸಿದರು. ತುಳು ಚಿತ್ರರಂಗದ ಮೇಲೆ ಕೇವಲ ಕಾಮಿಡಿ ಚಿತ್ರಗಳನ್ನು ಮಾಡುತ್ತಾರೆಂಬ ಅಪವಾದವಿದೆ.
ಅದನ್ನು ಈ ಚಿತ್ರದ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡಿದ್ದೇವೆ. ಆ್ಯಕ್ಷನ್‌ ಮತ್ತು ಮನೋರಂಜನೆ ಬೇಕಾದ ಅಂಶಗಳನ್ನು ತೆರೆಯ ಮೇಲೆ ತಂದಿದ್ದೇವೆ. ಪ್ರೀಮಿಯರ್‌ ಪ್ರದರ್ಶನ ನೋಡಿದ ಸಾವಿರಕ್ಕೂ ಮಿಕ್ಕಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೇರೆ ಭಾಷೆಯ ಚಿತ್ರಗಳಿಗೆ ಕಮ್ಮಿ ಇಲ್ಲದಂತೆ ಸಿನಿಮಾ ನಿರ್ಮಾಣ ಮಾಡಿದ್ದು, ಆ್ಯಕ್ಷನ್‌ಗೆ ಹೆಚ್ಚು ಒತ್ತು ನೀಡಿದ್ದೆವೆ. ಚಿತ್ರದ ಸಾಹದ ದೃಶ್ಯಗಳನ್ನು 14 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎಂದರು.
ಚಿತ್ರದ ನಾಯಕ ಅರ್ಜುನ್‌ ಕಾಪಿಕಾಡ್‌, ನಿರ್ಮಾಪಕರಾದ ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌ ಹಾಗೂ ರಾಜೇಶ್‌ ಕುಡ್ಲ ಗೋಷ್ಠಿಯಲ್ಲಿ ಇದ್ದರು.