ನೋರ್ತ್ ಶಾಲಾ ಹಳೇ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿ ಬೇಸಗೆ ಶಿಬಿರ ಸಂಪನ್ನ

ಉಡುಪಿ: ನೋರ್ತ್ ಶಾಲಾ ಹಳೇ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಎಂಟು ದಿನಗಳ‌ ಕಾಲ ನೋರ್ತ್ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಇಂದು ರವಿವಾರ (ಎಪ್ರಿಲ್ 23 ರಂದು) ಶಾಲಾ ಆವರಣದಲ್ಲಿ ಆಯೋಜಿಸಲ್ಪಟ್ಟಿತು. ಕಳೆದ ವಾರ, ಎಪ್ರಿಲ್ 16 ರಂದು, ಉಡುಪಿಯ ಯುವ ಉದ್ಯಮಿ ಅಜಯ್ ಪಿ. ಶೆಟ್ಟಿ ಇವರು ಬೇಸಿಗೆ ಶಿಬಿರವನ್ನು ಉದ್ಘಾಟಿಸಿದ್ದರು.

ಇಂದಿನ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ರಂಜಿತಾ ರಮಾನಾಥ್ ನಾಯಕ್, ಮುರಳಿ ಬಲ್ಲಾಳ್, ಶ್ರೀಮತಿ ಭಾಗ್ಯಶ್ರೀ ದೊಡ್ಡಮನಿ ಮತ್ತು ಶ್ರೀಮತಿ ಕಲ್ಯಾಣಿ ಪೈ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ನೋರ್ತ್ ಶಾಲಾ ಹಳೆ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೊ. ಕೆ. ಶ್ರೀನಾಥ್ ರಾವ್ ಮಾತನಾಡಿ, ಉಚಿತ ಬೇಸಿಗೆ ಶಿಬಿರದ ಸದುದ್ದೇಶ ಮತ್ತು ಶತಮಾನೋತ್ಸವದ ಹೊಸ್ತಿಲಲ್ಲಿ ಇರುವ ನೋರ್ತ್ ಶಾಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಮುಂದಿನ ರೂಪುರೇಷೆಗಳ‌ ಕುರಿತು ಮಾಹಿತಿ ನೀಡಿದರು.

ಎಂಟು ದಿನಗಳ‌ ಕಾಲ, ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಿದ ಸುಮಾರು 45 ಮಕ್ಕಳಿಗೆ ನೃತ್ಯ, ಚಿತ್ರಕಲೆ, ಕರಕುಶಲ ತರಬೇತಿ, ವ್ಯಕ್ತಿತ್ವ ವಿಕಸನ, ಪೇಪರ್ ಕ್ರಾಫ್ಟ್, ನೀತಿ ಕಥೆಗಳು, ಗ್ರಾಮೀಣ ಕ್ರೀಡೆಗಳು ಮುಂತಾದ ವಿವಿಧ ವಿಷಯಗಳ ಕುರಿತು ಚಟುವಟಿಕೆಗಳನ್ನು ಆಯೋಜಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಅವರ ಹೆತ್ತವರು ಶಿಬಿರದಲ್ಲಿ ಆಯೋಜಿಸಿದ್ದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಂಸಾ ಪತ್ರ, ಡ್ರಾಯಿಂಗ್ ಕಿಟ್, ಸ್ಟೈನ್ ಲೆಸ್ ಸ್ಟೀಲ್ ವಾಟರ್ ಬಾಟಲ್‌ಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಅಂತರರಾಷ್ಟ್ರೀಯ ಯೋಗ‌ ಪ್ರಶಸ್ತಿ ವಿಜೇತೆ ಕುಮಾರಿ ಶಿವಾನಿ ಶೆಟ್ಟಿ ಮತ್ತು ಶಿಬಿರಕ್ಕೆ ಮಾರ್ಗದರ್ಶನ ನೀಡಿ ಸಹಕರಿಸಿದ ಶ್ರೀಮತಿ ಕಲ್ಯಾಣಿ ಪೈ‌ ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನೆಡೆಯಿತು.

ಶಾಲಾ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಹೇಶ್ ನಾಯಕ್, ಜಂಟಿ ಕಾರ್ಯದರ್ಶಿ ಹರೀಶ್ ಶೇರಿಗಾರ್, ಸಂಘದ‌ ಸದಸ್ಯರುಗಳಾದ ಅಮರನಾಥ್ ಭಟ್, ಶೇಖ್ ಮಕ್ಬೂಲ್, ಚೇತನ್ ಕುಮಾರ್ ನಾಯಕ್, ಸತೀಶ್ ಹೆಗಡೆ, ಅನಿಲ್ ಬೈಲಕೆರೆ, ಸತೀಶ್ ಶೇಟ್, ಸುಧೀಂದ್ರ ರಾವ್, ವಿಶ್ವನಾಥ್ ಬಾಳಿಗಾ, ಚಂದ್ರಕಲಾ ಬಾಳಿಗಾ, ಶಾಂತಾ ಬಾಳಿಗಾ, ಜ್ಯೋತಿ ಬಲ್ಲಾಳ್, ಶಾಲಾ ಶಿಕ್ಷಕಿ ಶೋಭಾ ಶೆಟ್ಟಿ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸ್ರಜನ್ ಶೇರಿಗಾರ್, ಹರಿಪ್ರಸಾದ್, ಶ್ರೀದೇವಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಮತಿ ಶುಭಾ ರಾವ್‌ ನಿರೂಪಿಸಿದರು. ಕುಮಾರಿ ಅನನ್ಯಾ ಚೇತನ್ ನಾಯಕ್ ಪ್ರಾರ್ಥಿಸಿದರು. ಶ್ರೀಮತಿ ಶ್ರೀದೇವಿ ಸ್ವಾಗತಿಸಿದರು. ರಂಜನ್ ಭಾಗವತ್ ವಂದಿಸಿದರು.