ಬೆಳ್ತಂಗಡಿ: ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ತಲವಾರು ತೋರಿಸಿ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಿಯಾಜ್(38) ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಫಳ್ನೀರ್ ನಿವಾಸಿ ರಿಯಾಜ್ ಎಂಬಾತನನ್ನು ಸ್ಕಾರ್ಪಿಯೋ ಕಾರಿನ ಸಹಿತ ವಶಕ್ಕೆ ಪಡೆಯಲಾಗಿದೆ. ಬಂಧನದ ಬಳಿಕ ದೂರುದಾರರಾದ ಹರೀಶ್ ಪೂಂಜಾ ಕಾರು ಚಾಲಕ ನವೀನ್, ರಿಯಾಜ್ ಗುರುತು ಪತ್ತೆ ಹಚ್ಚಿದ್ದಾರೆ.
ಆರೋಪಿ ಬಂಧನದ ಬಗ್ಗೆ ದ.ಕ ಜಿಲ್ಲಾ ಎಸ್ಪಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದು, ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ಯಾವುದೇ ಮಾರಕಾಸ್ತ್ರ ಕಾರಿನಲ್ಲಿ ಪತ್ತೆಯಾಗಿಲ್ಲ. ಕೇರಳ ರಿಜಿಸ್ಟ್ರೇಷನ್‌ನ ಕಾರು ಇದಾಗಿದ್ದು, ಕಾರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಶಾಸಕರಿದ್ದ ಕಾರು ತಡೆದು ಅವಾಚ್ಯವಾಗಿ ನಿಂದನೆ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಎಸ್ಪಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.