ನಿಮ್ಮ ತಿಂಗಳ ಸಂಬಳ ಎಷ್ಟೇ ಇರಲಿ, ಈ ಸರಳ ಸೂತ್ರ ಪಾಲಿಸಿದರೆ ಭವಿಷ್ಯಕ್ಕೆ ಉಳಿತಾಯ ಮಾಡಬಹುದು!

ತಿಂಗಳಿಗೆ 15-20 ಸಾವಿರದ ಒಳಗೆ ಸಂಬಳ ಪಡೆಯುವವರು ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂದು ಚಿಂತೆಪಡುತ್ತಿರುತ್ತಾರೆ. ಆದರೆ ಆದಾಯ ಕಡಿಮೆ ಇದ್ದರೂ ಸರಿಯಾದ ರೀತಿಯಲ್ಲಿ ಹಣವನ್ನು ನಿರ್ವಹಿಸಿದರೆ ದಿನನಿತ್ಯದ ಖರ್ಚು, ಉಳಿತಾಯ ಮತ್ತು ಭವಿಷ್ಯದ ಅಗತ್ಯಗಳನ್ನು ಸಮತೋಲನಗೊಳಿಸಬಹುದು. ಸಂಬಳ ಬಂದ ತಕ್ಷಣವೇ ಎಲ್ಲ ಹಣವನ್ನು ಖರ್ಚು ಮಾಡುವ ಬದಲು ಮೊದಲೇ ಒಂದು ಬಜೆಟ್ ರೂಪಿಸಿಕೊಳ್ಳುವುದು ಬಹಳ ಮುಖ್ಯ.

ಹಾಗಾಗಿ ನಿಮ್ಮ ಸಂಬಳ ಎಷ್ಟೇ ಇರಲಿ ಅದರಲ್ಲಿ ಸಣ್ಣ ಮೊತ್ತವನ್ನು ಉಳಿತಾಯಕ್ಕೆ ನೀವು ಮೀಸಲಿಡಲೇಬೇಕು. ಸಂಬಳ ಕೈಗೆ ಸಿಗುತ್ತಿದ್ದ ಹಾಗೆ ಮೊದಲು ಉಳಿತಾಯದ ಹಣವನ್ನು ಎತ್ತಿಟ್ಟು ಮತ್ತೆ ಖರ್ಚುಗಳ ಕಡೆಗೆ ಗಮನ ನೀಡಿದರೆ ಖಂಡಿತಾ ಕಷ್ಟ ಕಾಲದಲ್ಲಿ ಬೇರೆಯವರ ಹತ್ತಿರ ಕೈ ಚಾಚುವ ಪರಿಸ್ಥಿತಿ ಉಂಟಾಗುವುದಿಲ್ಲ. ಇಲ್ಲಿ 20000 ಸಂಬಳವಿದ್ದರೆ ಹೇಗೆಹಣದ ವಿಂಗಡಣೆ ಮಾಡಬಹುದು ಎಂಬುದನ್ನು ಸಾಂಕೇತಿವಾಗಿ ತೋರಿಸಲಾಗಿದೆ. ಇದನ್ನು ನೀವು ನಿಮ್ಮ ಸಂಬಳಕ್ಕೆ ಅನ್ವಯಿಸಿಕೊಳ್ಳಬಹುದು.

₹20,000 ಸಂಬಳವನ್ನು ಹೀಗೆ ವಿಂಗಡಿಸಿಕೊಳ್ಳಿ

ಮನೆ ಮತ್ತು ಅಗತ್ಯ ಖರ್ಚು – ₹8,000

ಮನೆ ಬಾಡಿಗೆ, ದಿನಸಿ, ವಿದ್ಯುತ್ ಬಿಲ್ ಸೇರಿದಂತೆ ಅಗತ್ಯ ವೆಚ್ಚಗಳಿಗೆ ಸುಮಾರು ₹8,000 ಮೀಸಲಿಡಬಹುದು. ನಿಮ್ಮ ಕುಟುಂಬದ ಪರಿಸ್ಥಿತಿಗೆ ಅನುಗುಣವಾಗಿ ಈ ಮೊತ್ತವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

ದಿನನಿತ್ಯದ ವೈಯಕ್ತಿಕ ಖರ್ಚು – ₹3,500

ಪ್ರಯಾಣ, ಮೊಬೈಲ್ ರೀಚಾರ್ಜ್, ಹೊರಗಿನ ಸಣ್ಣಪುಟ್ಟ ಖರ್ಚು, ವೈಯಕ್ತಿಕ ಅಗತ್ಯಗಳಿಗೆ ₹3,500 ಮೀಸಲಿಡಬಹುದು. ಈ ವಿಭಾಗದಲ್ಲಿ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿದರೆ ತಿಂಗಳ ಕೊನೆಯಲ್ಲಿ ಹೆಚ್ಚಿನ ಹಣ ಉಳಿಸಬಹುದು.

ಉಳಿತಾಯ – ₹3,500

ಸಂಬಳ ಬಂದ ದಿನವೇ ಕನಿಷ್ಠ ₹3,500 ಅನ್ನು ಪ್ರತ್ಯೇಕ ಖಾತೆಗೆ ವರ್ಗಾಯಿಸುವ ಅಭ್ಯಾಸ ಮಾಡಿಕೊಳ್ಳಿ. ಉಳಿದ ಹಣದಲ್ಲಿ ಖರ್ಚು ಮಾಡುವುದಕ್ಕಿಂತ ಮೊದಲು ಉಳಿತಾಯವನ್ನು ಬೇರ್ಪಡಿಸುವುದು ಉತ್ತಮ. ಹೀಗೆ ಮಾಡಿದರೆ ವರ್ಷಕ್ಕೆ ₹42,000 ಉಳಿತಾಯ ಮಾಡಬಹುದು. ಬ್ಯಾಂಕು, ಅಂಚೆಕಚೇರಿಗಳಲ್ಲಿ ಆರ್.ಡಿ. ಮಾಡಬಹುದು. ಅಥವಾ ಇನ್ನಿತರೆ ಉಳಿತಾಯ ಯೋಜನೆಗಳಲ್ಲಿ ವಿನಿಯೋಗಿಸಬಹುದು.

ತುರ್ತು ನಿಧಿ – ₹2,000

ಅನಿರೀಕ್ಷಿತ ವೈದ್ಯಕೀಯ ವೆಚ್ಚ, ಕೆಲಸದಲ್ಲಿ ತೊಂದರೆ ಅಥವಾ ಇತರ ತುರ್ತು ಸಂದರ್ಭಗಳಿಗೆ ಪ್ರತಿ ತಿಂಗಳು ₹2,000 ಮೀಸಲಿಡಬಹುದು. ನಿಧಾನವಾಗಿ ಈ ಹಣವನ್ನು ಹೆಚ್ಚಿಸಿಕೊಂಡು ಕನಿಷ್ಠ ಕೆಲವು ತಿಂಗಳ ಅಗತ್ಯ ಖರ್ಚಿಗೆ ಸಾಕಾಗುವಷ್ಟು ತುರ್ತು ನಿಧಿ ರೂಪಿಸಿಕೊಳ್ಳುವುದು ಒಳ್ಳೆಯದು.

ಮನರಂಜನೆ ಮತ್ತು ಸ್ವಂತ ಆಸೆಗಳಿಗೆ – ₹1,500

ಉಳಿತಾಯ ಮಾಡಬೇಕು ಎಂಬ ಕಾರಣಕ್ಕೆ ನಿಮ್ಮ ಎಲ್ಲಾ ಆಸೆಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಸ್ನೇಹಿತರೊಂದಿಗೆ ಹೊರಗೆ ಹೋಗುವುದು, ಸಣ್ಣಪುಟ್ಟ ಖರೀದಿ ಅಥವಾ ಮನರಂಜನೆಗಾಗಿ ₹1,500 ಮೀಸಲಿಡಬಹುದು. ಆದರೆ ಈ ಮೊತ್ತವನ್ನು ಮೀರದಂತೆ ನೋಡಿಕೊಳ್ಳುವುದು ಮುಖ್ಯ.

ಕೌಶಲ್ಯ ಮತ್ತು ಭವಿಷ್ಯದ ಗುರಿಗಳಿಗೆ – ₹1,500

ಹೊಸ ಕೌಶಲ್ಯ ಕಲಿಯಲು, ಆನ್‌ಲೈನ್ ಕೋರ್ಸ್‌ಗಳಿಗೆ ಅಥವಾ ನಿಮ್ಮ ಭವಿಷ್ಯದ ಗುರಿಗಾಗಿ ₹1,500 ಬಳಸಬಹುದು. ನಿಮ್ಮ ಆದಾಯವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿ ಕೂಡ ಒಂದು ರೀತಿಯ ಹೂಡಿಕೆಯೇ ಆಗಿದೆ.

ಒಂದು ತಿಂಗಳ ಬಜೆಟ್ ಹೀಗಿರಲಿ

ಖರ್ಚಿನ ವಿಭಾಗಮೊತ್ತ
ಮನೆ ಮತ್ತು ಅಗತ್ಯ ಖರ್ಚು₹8,000
ದಿನನಿತ್ಯದ ವೈಯಕ್ತಿಕ ಖರ್ಚು₹3,500
ಉಳಿತಾಯ₹3,500
ತುರ್ತು ನಿಧಿ₹2,000
ಮನರಂಜನೆ ಮತ್ತು ಸ್ವಂತ ಆಸೆ₹1,500
ಕೌಶಲ್ಯ ಮತ್ತು ಭವಿಷ್ಯದ ಗುರಿ₹1,500
ಒಟ್ಟು₹20,000

ಮುಖ್ಯವಾಗಿ ನೆನಪಿಡಿ

ತಿಂಗಳಿಗೆ ₹20,000 ಅಥವಾ ಅದಕ್ಕಿಂತ ಕಡಿಮೆ ಸಂಬಳ ಪಡೆಯುವವರು ಹಣ ಉಳಿಸಲು ದೊಡ್ಡ ಮೊತ್ತದ ಆದಾಯಕ್ಕಾಗಿ ಕಾಯಬೇಕಿಲ್ಲ. ಸಣ್ಣ ಮೊತ್ತದಿಂದಲೇ ಉಳಿತಾಯದ ಅಭ್ಯಾಸ ಆರಂಭಿಸುವುದು ಮುಖ್ಯ. ಸಂಬಳ ಬಂದ ತಕ್ಷಣ ಉಳಿತಾಯದ ಹಣವನ್ನು ಬೇರ್ಪಡಿಸಿ, ನಂತರ ಉಳಿದ ಹಣದಲ್ಲಿ ತಿಂಗಳ ಖರ್ಚು ನಿರ್ವಹಿಸಿದರೆ ಹಣಕಾಸಿನ ಶಿಸ್ತು ಬೆಳೆಸಿಕೊಳ್ಳಬಹುದು.

ಅಗತ್ಯವಿಲ್ಲದ ಆನ್‌ಲೈನ್ ಶಾಪಿಂಗ್, ಪದೇಪದೇ ಹೊರಗೆ ಊಟ ಮಾಡುವುದು ಮತ್ತು ಸಣ್ಣ ಸಣ್ಣ ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಇಟ್ಟರೆ ತಿಂಗಳಿಗೆ ಇನ್ನಷ್ಟು ಹಣ ಉಳಿಸಬಹುದು. ಮುಖ್ಯವಾಗಿ, ನಿಮ್ಮ ಆದಾಯ ಮತ್ತು ಕುಟುಂಬದ ಜವಾಬ್ದಾರಿಗಳಿಗೆ ಅನುಗುಣವಾಗಿ ಈ ಬಜೆಟ್ ಅನ್ನು ಬದಲಾಯಿಸಿಕೊಳ್ಳಿ.

ಸಂಬಳ ಎಷ್ಟೇ ಇರಲಿ, ಹಣವನ್ನು ಎಷ್ಟು ಸಂಪಾದಿಸುತ್ತೇವೆ ಎನ್ನುವುದಕ್ಕಿಂತ ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದೇ ಭವಿಷ್ಯದ ಆರ್ಥಿಕ ಸ್ಥಿರತೆಗೆ ಮುಖ್ಯ.