ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡುವ ಪ್ರಸ್ತಾಪ ಇಲ್ಲ. ವದಂತಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಓಮಿಕ್ರಾನ್ ಆತಂಕದ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿನೋಮಿಕ್ ಸೀಕ್ವೆನ್ಸ್ ವರದಿ ಬರುವುದಕ್ಕೆ ಇನ್ನೂ ಒಂದು ವಾರ ಬೇಕಾಗುತ್ತದೆ. ಡಿಸೆಂಬರ್ 1 ರಂದು ನಮಗೆ ವರದಿ ಬರುತ್ತದೆ. ಈಗಾಗಲೇ 12 ದೇಶಗಳಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಅಂತರಾಷ್ಟ್ರೀಯ ವಿಮಾನಗಳ ಮೂಲಕ ರಾಜ್ಯಕ್ಕೆ ಪ್ರಯಾಣಿಕರು ಬರುತ್ತಿದ್ದಾರೆ. ಎಲ್ಲರನ್ನೂ ಸಹ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 12-13 ದಿನಗಳಿಂದ ಬಂದವರ ಮೇಲೆ ನಿಗಾ ಇಡಲಾಗಿದ್ದು, ಅವರ ಫೋನ್ ನಂಬರ್ರನ್ನು ಟ್ರೇಸ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಯಾವುದೇ ಲಾಕ್ಡೌನ್ ಮಾಡುವ ಪ್ರಸ್ತಾಪವೇ ಸರ್ಕಾರ ಮುಂದೆ ಇಲ್ಲ. ಒಂದು ವೇಳೆ ಲಾಕ್ಡೌನ್ ಕುರಿತಂತೆ ವದಂತಿ ಹಬ್ಬಿಸಿದವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಜನ ಬಹಳ ನಷ್ಟ ಅನುಭವಿಸುದ್ದಾರೆ. ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ, ಮತ್ತೆ ಆತಂಕ ಸೃಷ್ಟಿ ಮಾಡೋದು ಬೇಡ. ಸಾಮಾಜಿಕ ಜಾಲತಾಣಗಳು ಈ ಬಗ್ಗೆ ಎಚ್ಚರವರಿಸಬೇಕು. ಸಾಮಾಜಿಕ ಜಾಲತಾಣಗಳು ತಪ್ಪು ಸುದ್ದಿ ಹರಡಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.