ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಿದ್ಧತೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದು, ವಿಧಾನ ಪರಿಷತ್ ಕಾರ್ಯದರ್ಶಿಗೆ ಅವಿಶ್ವಾಸ ನೋಟಿಸ್ ನೀಡಿದೆ.

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸದನದಲ್ಲಿ ನಿಷ್ಪಕ್ಷವಾಗಿ ವರ್ತಿಸದೇ ಕಾಂಗ್ರೆಸ್‌ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದಾರೆ ಎಂದು ನೋಟಿಸ್‌ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ಬಹುಮತದ ಕೊರತೆ:
ಇತ್ತೀಚೆಗೆ ನಡೆದ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿದೆ. ಆದರೂ ಬಹುಮತಕ್ಕೆ 6 ಸ್ಥಾನಗಳ ಕೊರತೆ ಇದೆ. ಬಹುಮತಕ್ಕೆ 37 ಸ್ಥಾನ ಹೊಂದಿಬೇಕು. ಸದ್ಯ ಪರಿಷತ್ತಿನ ಒಟ್ಟು ಸದಸ್ಯರ ಬಲ 75 ಸ್ಥಾನಗಳ ಪೈಕಿ ಬಿಜೆಪಿ 31, ಕಾಂಗ್ರೆಸ್‌ 28 ಮತ್ತು ಜೆಡಿಎಸ್‌ 14 ಸದಸ್ಯರ ಬಲವನ್ನು ಹೊಂದಿವೆ. ಹಾಗಾಗಿ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಜೆಡಿಎಸ್‌ ಬೆಂಬಲ ಯಾಚಿಸಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.