ನಿಟ್ಟೆ ತಾಂತ್ರಿಕ ಕಾಲೇಜಿನ ಸಂಶೋಧಕರ ತಂಡದಿಂದ ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರ

ಕಾರ್ಕಳ: ನಿಟ್ಟೆಯ ಎನ್‌ಎಂಎಎಂ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ‘ಸೆಂಟರ್ ಫಾರ್ ಸಿಸ್ಟಮ್ ಡಿಸೈನ್, ಫ್ಯಾಬ್ರಿಕೇಶನ್ & ಟೆಸ್ಟಿಂಗ್’ ಹಾಗೂ ‘ಎನ್‌ಎಂಎಎಂಐಟಿ ಫ್ರೋನಿಯಸ್ ಸೆಂಟರ್ ಫಾರ್ ವೆಲ್ಡಿಂಗ್ ಟೆಕ್ನಾಲಜಿ’ಯ ಸಂಶೋಧಕರ ತಂಡವು ಕಾರ್ಕಳದ ಸ್ಥಳೀಯ ಟಿಂಬರ್ ಉದ್ಯಮದ ನೆರವಿಗಾಗಿ ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದೆ.

ಮರದ ಕಾರ್ಖಾನೆಗಳಲ್ಲಿ ಮರದ ಹಲಿಗೆಗಳನ್ನು ಮಾಡುವ ಸಂದರ್ಭದಲ್ಲಿ ಸಾ ಬ್ಲೇಡ್‌ಗಳು ಮುರಿಯುವುದು ಸಾಮಾನ್ಯ. ಈ ಸಂದರ್ಭದಲ್ಲಿ ಕಾರ್ಕಳದ ಉದ್ಯಮಿಯು ಈ ಬ್ಲೇಡ್‌ಗಳನ್ನು ಮಂಗಳೂರಿಗೆ ಕೊಂಡೊಯ್ದು ಸರಿಪಡಿಸುವ ಅನಿವಾರ್ಯತೆ ಇದ್ದು, ಕೋವಿಡ್-೧೯ ಲಾಕ್‌ಡೌನ್/ ಜಿಲ್ಲಾವಾರು ಸೀಲ್‌ಡೌನ್‌ನಿಂದ ಈ ಪ್ರಕ್ರಿಯೆ ಬಹಳಷ್ಟು ಕಠಿಣವಾಗುತ್ತಿತ್ತು. ಈ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಸಂಶೋಧಕರ ತಂಡವು ಅತೀ ಕಡಿಮೆ ಖರ್ಚಿನಲ್ಲಿ ಉತ್ತಮ ಕಾರ್ಯಕ್ಷಮತೆಯುಳ್ಳ ಬ್ಯಾಂಡ್ ಸಾ ಬ್ಲೇಡ್ ವೆಲ್ಡ್ಂಗ್ ಉಪಕರಣವನ್ನು ವಿನ್ಯಾಸಗೊಳಿಸಿ ಟಿಂಬರ್ ಸಂಸ್ಥೆಗೆ ನೆರವಾಯಿತು. ಇದರಿಂದಾಗಿ ಮುರಿದ ಬ್ಯಾಂಡ್ ಸಾ ಬ್ಲೇಡ್‌ಗಳನ್ನು ಮತ್ತೆ ಕೆಲಸಕ್ಕೆ ಬಳಸಿಕೊಳ್ಳಲು ಸಾಧ್ಯವಾಗಿ, ಉತ್ಪಾದನೆ ಹೆಚ್ಚಿತು.

ಹೊಸದಾಗಿ ಅಭಿವೃದ್ಧಿ ಪಡಿಸಲಾದ ಉಪಕರಣದಲ್ಲಿ ತುಂಡಾದ ಬ್ಯಾಂಡ್ ಸಾ ಬ್ಲೇಡ್‌ಗಳನ್ನು ಮತ್ತೆ ಜೋಡಿಸಲು ಎಂಐಜಿ ವೆಲ್ಡಿಂಗ್ ಮೆಷಿನ್ ಬಳಸಿಕೊಳ್ಳಲಾಗುತ್ತದೆ. ಆರ್ಡ್ಯುನೊ ಮೆಗಾ ಕಂಟ್ರೋಲರ್ ಮೂಲಕ ಇದರ ಹಿಮ್ಮುಖ- ಮುಮ್ಮುಖ ಚಲನೆಯನ್ನು ನಿಯಂತ್ರಿಸಲಾಗುತ್ತದೆ. ಕಡಿದಾದ ಮೋಟರ್ ನಿಯಂತ್ರಿತ ಮೋಟರೈಸ್ಡ್ ಲೀನಿಯರ್ ಸ್ಟೇಜ್‌ನಿಂದ ವೆಲ್ಡಿಂಗ್‌ಟಾರ್ಚ್ ವೇಗವನ್ನು ನಿಯಂತ್ರಿಸಲಾಗುತ್ತದೆ. ಎಂಐಜಿ ವೆಲ್ಡಿಂಗ್ ಮೆಷಿನ್ ಮತ್ತು ಮೋಟರೈಸ್ಡ್ ಸ್ಟೇಜ್‌ಗಳನ್ನು ಆಪರೇಟರ್ ಇಂಟರ್‌ಫೇಸ್‌ನಲ್ಲಿ ಬಟನ್ ಮೂಲಕ ಸ್ವಿಚ್ ಆಫ್ ಮತ್ತು ಆನ್ ಮಾಡಬಹುದಾಗಿದೆ. ವೆಲ್ಡಿಂಗ್ ಕರೆಂಟ್ ಮತ್ತು ವೈರ್ ವೇಗವನ್ನೂ ಈ ಉಪಕರಣದಲ್ಲಿ ನಿಯಂತ್ರಿಸಬಹುದಾಗಿದೆ.

‘ಸಮಾಜದ ವಿವಿಧ ಉದ್ಯಮಗಳಿಗೆ ಉಪಯೋಗವಾಗುವಂತಹ ಇಂತಹ ಉಪಕರಣಗಳನ್ನು ಹೊರತರಲು ನಿಟ್ಟೆ ತಾಂತ್ರಿಕ ಕಾಲೇಜಿನ ಸಂಶೋಧಕರು ಶ್ರಮಿಸುತ್ತಿರುವರು’ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಿಳಿಸಿದ್ದಾರೆ.