udupixpress
Home Trending ನಿಟ್ಟೆ ಪ್ರಾಧ್ಯಾಪಕರು ಆವಿಷ್ಕರಿಸಿದ್ರು ಸ್ವಯಂಚಾಲಿತ ತೀರ್ಥ ವಿತರಣಾ ಯಂತ್ರ

ನಿಟ್ಟೆ ಪ್ರಾಧ್ಯಾಪಕರು ಆವಿಷ್ಕರಿಸಿದ್ರು ಸ್ವಯಂಚಾಲಿತ ತೀರ್ಥ ವಿತರಣಾ ಯಂತ್ರ

ನಿಟ್ಟೆ: ಕೊರೋನ ಸೋಂಕು ವಿಶ್ವದಾದ್ಯಂತ ವ್ಯಾಪಿಸಿರುವ ಹಿನ್ನಲೆಯಲ್ಲಿ ಸರ್ವ ಕ್ಷೇತ್ರಗಳೂ ವಿವಿಧ ಬಗೆಯ ತೊಂದರೆಗಳಿಗೆ ಒಳಗಾಗಿವೆ. ಪ್ರಸ್ತುತ ಸಂದರ್ಭದಲ್ಲಿ ಕೊರೋನಾ ಸೋಂಕಿನ ತಡೆಗೆ ಅಗತ್ಯವಿರುವ ಹಲವಾರು ಕ್ರಮಗಳನ್ನು ಸರ್ಕಾರ, ಸಂಘ ಸಂಸ್ಥೆಗಳು ನಡೆಸುತ್ತಿವೆ. ಪ್ರತಿಕ್ಷೇತ್ರದಲ್ಲೂ ಅದರದ್ದೇ ಆದ ಹೊಸತೊಡಕುಗಳು ಹಾಗೂ ಅವಕಾಶಗಳು ಕಾಣಸಿಗುತ್ತಿವೆ.

ಕೊರೊನಾ ತಡೆಗೆ ಅಗತ್ಯವಿರುವ ಸಾಮಾಜಿಕ ಅಂತರವನ್ನು ಕಾಪಾಡುವುದರೊಂದಿಗೆ ದೇವಾಲಯಗಳಲ್ಲಿ ತೀರ್ಥ ಪ್ರಸಾದ ವಿತರಣೆಗೆ ಅನುಕೂಲವಾಗುವ ರೀತಿಯ ಒಂದು ತಂತ್ರಜ್ಞಾನದ ಬಗೆಗೆ ಅದೆಷ್ಟು ಮಂದಿ ಚಿಂತಿಸಿದ್ದರೋ ತಿಳಿದಿಲ್ಲ, ಆದರೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಸಂತೋಷ್ ಇವರು ಸಂವೇದಕಾಧಾರಿತ ತೀರ್ಥ ನೀಡುವ ಯಂತ್ರವನ್ನು ಆವಿಷ್ಕರಿಸಿದ್ದಾರೆ.

ಈ ಯಂತ್ರದ ತೀರ್ಥಸ್ವೀಕರಿಸುವ ಭಾಗದಲ್ಲಿ ನೀವು ಕೈಹಿಡಿದರೆ ಸಾಕು, ನಿಮ್ಮ ಕೈಗೆ ನಿಗದಿತ ಪ್ರಮಾಣದ ತೀರ್ಥ ಸುರಿಯುತ್ತದೆ. ಈ ಯಂತ್ರವು ವಿದ್ಯುತ್ ಶಕ್ತಿಯ ಸಹಾಯದೊಂದಿಗೆ ಸ್ವಯಂಚಾಲಿತವಾಗಿದ್ದು ಸುಲಭವಾಗಿ ಅನುಸ್ಥಾಪನೆಗೊಳಿಸಬಹುದಾಗಿದೆ.

ಈ ಡಿಸ್ಪೆಂಸರ್‍ನಲ್ಲಿ ತೀರ್ಥ ಮುಗಿಯುವ ಸಂದರ್ಭದಲ್ಲಿ ಸುಲಭವಾಗಿ ಮರುಪೂರಣ ಮಾಡಬಹುದಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಯಂತ್ರವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಜೂ.16 ರಂದು ಸಂಸ್ಥೆಯ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿ ಉದ್ಘಾಟಿಸಿದರು. ‘ಪರಿಸ್ಥಿತಿಗೆ ಅನುಗುಣವಾದ ಇಂತಹ ಅತ್ಯಾಧುನಿಕ ಚಿಂತನೆಗಳನ್ನು ನಡೆಸುವುದು ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಅಗತ್ಯ. ಸಂದರ್ಭೋಚಿತ ಆವಿಷ್ಕಾರಗಳು ಇನ್ನಷ್ಟು ನಡೆಯಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಐ ಆರ್ ಮಿತ್ತಂತಾಯ, ರೆಜಿಸ್ಟ್ರಾರ್ ಪ್ರೊ.ಯೋಗೀಶ್ ಹೆಗ್ಡೆ, ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕಾರ್ತಿಕ್ ಪೈ ಮತ್ತು ಗ್ರಂಥಪಾಲಕ ಡಾ.ದಿವಾಕರ ಭಟ್ ಉಪಸ್ಥಿತರಿದ್ದರು.

error: Content is protected !!