ಕಾರ್ಕಳ: ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ಜನವರಿ 2026 ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿನಿ ಕುಮಾರಿ ರೋಸ್ ಡಿ’ಸಿಲ್ವಾ ಅತ್ಯುತ್ತಮ ಅಂಕಗಳಿಸುವ ಮೂಲಕ ತೇರ್ಗಡೆಯಾಗಿದ್ದಾರೆ. ಇವರು ಕಾರ್ಕಳದ ಕರಿಯಕಲ್ಲಿನ ಶ್ರೀಮತಿ ಸಿಂಥಿಯಾ ಡಿ’ಸಿಲ್ವಾ ಮತ್ತು ಶ್ರೀ ಕ್ಯಾರೆಲ್ ಡಿ’ಸಿಲ್ವಾ ಅವರ ಪುತ್ರಿಯಾಗಿದ್ದಾರೆ.
ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನಲ್ಲಿ 2018 ರಿಂದ 2021ನೇ ಸಾಲಿನಲ್ಲಿ ಬಿಕಾಂ ಪದವಿ ಪೂರೈಸಿದ ಇವರು 2021 ರ ಎಪ್ರಿಲ್- ಮೇ ನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಯಲ್ಲಿ ಬಿಕಾಂ ವಿಭಾಗದಲ್ಲಿ ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ. 2022 ರ ಮೇಯಲ್ಲಿ ಇಂಟರ್ ಮೀಡಿಯೇಟ್ ಗ್ರೂಪ್ ಒಂದರ ಪರೀಕ್ಷೆ ತೇರ್ಗಡೆಯಾದ ಇವರು, ಗ್ರೂಪ್ ಎರಡರ ಪರೀಕ್ಷೆಯನ್ನು 2023 ರ ಮೇಯಲ್ಲಿ ತೇರ್ಗಡೆಯಾಗಿದ್ದರು. ಸತತ ಪ್ರಯತ್ನ ಮತ್ತು ಸ್ವಯಂ ಕಲಿಕೆಯ ಮುಖಾಂತರ ಇದೀಗ ಸಿ.ಎ. ಪದವಿಯನ್ನು ಪಡೆದಿರುತ್ತಾರೆ.
ಇವರಿಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ವಿಶಾಲ್ ಹೆಗ್ಡೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಎಸ್.ಮೂಡಿತ್ತಾಯ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ, ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ಬಳಗ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.















