ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಬೇಡಿ: ಜಿಲ್ಲಾಧಿಕಾರಿ

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲು 72 ಗಂಟೆ ಬಾಕಿ ಇದ್ದು, ಜಿಲ್ಲೆಯಲ್ಲಿ  ಶಾಂತಿಯುತ ಮತ್ತು ವ್ಯವಸ್ಥಿತ ಮತದಾನ ನಡೆಯಲು ಮತ್ತು ಮತದಾರರಿಗೆ ಯಾವುದೇ ಆಮಿಷಗಳನ್ನು ನೀಡಿ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು  ಯಾವುದೇ ರೀತಿಯ ಮಾದರಿ ನೀತಿ ಸಂಹಿತೆಗೆ ಉಲ್ಲಂಘನೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ  ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.

ಅವರು ಸೋಮವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಲೋಕಸಭಾ ಚುನವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದರು.

ಮತದಾರರಿಗೆ ಆಮಿಷ ನೀಡುವುದು, ಮತಗಟ್ಟೆಯ 100 ಮೀ ಒಳಗೆ ಪ್ರಚಾರ ಮಾಡುವುದು, ಮತದಾರರಿಗೆ ವಾಹನ ಸೌಲಭ್ಯ ಒದಗಿಸುವುದು, 48 ಗಂಟೆಯ ಒಳಗೆ ಸಾರ್ವಜನಿಕ ಸಭೆ ಸಮಾರಂಭ ನಡೆಸುವುದು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು  ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಡಿಸಿ ಹೇಳಿದರು.

ಚುನಾವಣಾ ಪ್ರಚಾರ /ಸಭೆ ಇತ್ಯಾದಿಗಳಿಗೆ ಕ್ಷೇತ್ರದ ಹೊರಗಿನಿಂದ ಕರೆತಂದಿರುವ  ಹಾಗೂ ಕ್ಷೇತ್ರದ ಮತದಾರರಲ್ಲದ ರಾಜಕೀಯ ಗಣ್ಯ ವ್ಯಕ್ತಿಗಳು, ಪ್ರಚಾರಕರು, ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ಕ್ಷೇತ್ರದಿಂದ ಹೊರಗೆ ಹೋಗಬೇಕು.  ಮತದಾನಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳು ಕಂಡು ಬಂದಲ್ಲಿ ಮಾಹಿತಿ ನೀಡಿ, ಯಾವುದೇ ಮನೆಗಳಲ್ಲಿ ರಾಜಕೀಯ ಸಭೆಗಳು ನಡೆಯುತ್ತಿದ್ದರೆ, ಮದ್ಯ ಹಂಚುತ್ತಿದ್ದರೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದರೆ, ಸಾಮೂಹಿಕ ಭೋಜನ ವ್ಯವಸ್ಥೆ ಮಾಡುವವರ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.  ಅಧಿಕಾರಿಗಳು ತಕ್ಷಣವೇ ಬಂದು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಿದ್ದಾರೆ ಎಂದು ಡಿಸಿ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ನೇಮಕಗೊಂಡಿರುವ ಎಲ್ಲಾ ಪ್ಲೈಯಿಂಗ್ ಸ್ವ್ಕಾಡ್ ತಪಾಸಣಾ ತಂಡಗಳು, ಸೆಕ್ಟರ್ ಅಧಿಕಾರಿಗಳಿಗೆ  ಇನ್ನೂ ಹೆಚ್ಚು ಜಾಗೃತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಮತ್ತು ಎಲ್ಲಾ ಚೆಕ್ ಪೋಸ್ಟ್ ಗಳನ್ನು ಹೆಚ್ಚಿನ ತಪಾಸಣೆಗೆ ಈಗಾಗಲೇ ಸೂಚಿಸಲಾಗಿದೆ ಎಂದು ಡಿಸಿ, ಯಾವುದೇ ಅಕ್ರಮ ಕಂಡುಬಂದಲ್ಲಿ ಸೀ ವಿಜಿಲ್ ಮೂಲಕ ಅಥವಾ ಸಹಾಯವಾಣಿ ಮೂಲಕ ದೂರು ನೀಡಿ ಎಂದರು.

ಸೌಂಡ್ ಸಿಸ್ಟಂ ಬಾಡಿಗೆಗೆ ನೀಡದಂತೆ ಸೂಚನೆ: ಏಪ್ರಿಲ್ 16ರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಧ್ವನಿವರ್ಧಕ, ಮೈಕಾ, ಸೌಂಡ್ ಸಿಸ್ಟಂಗಳನ್ನು ಕಾರ್ಯಕ್ರಮಗಳಿಗೆ ನೀಡದಂತೆ ಅವರು ಸೌಂಡ್ ಸಿಸ್ಟಂ ಆಪರೇಟರುಗಳಿಗೆ ಸೂಚಿಸಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ಅಣಕು ಮತದಾನ:

ಮತದಾನದ ದಿನ ಬೆಳಗ್ಗೆ 6 ಗಂಟೆಗೆ ಅಣಕು ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಎಲ್ಲಾ ಅಭ್ಯರ್ಥಿಗಳ ಏಜೆಂಟರು ಹಾಜರಿರುವಂತೆ ಡಿಸಿ ಸೂಚಿಸಿದರು. ಮತಗಟ್ಟೆ ಏಜೆಂಟರು ಮತಗಟ್ಟೆ ಒಳಗೆ ಯಾವುದೇ ರೀತಿಯ ಮೊಬೈಲ್  ಫೋನ್, ಸ್ಮಾರ್ಟ್ ವಾಚ್ (ವೈಫೈ, ಡೊಂಗಲ್ ಇತ್ಯಾದಿ)  ಮತ್ತು ಇಂಟರ್ನೆಟ್ ಸಂಪರ್ಕ ಹೊಂದಿರುವ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ಜಿಲ್ಲಾಡಳಿತದಿಂದ ಮತದಾನಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿದ್ದು, ಸುಗಮ ಮತು ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಿದ ಜಿಲ್ಲಾಧಿಕಾರಿಗಳು, ಯಾವುದೇ ಅಕ್ರಮ ಮತ್ತು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಂಡುಬಂದಲ್ಲಿ ತಕ್ಷಣವೇ ಗಮನಕ್ಕೆ ತರುವಂತೆ ಮತ್ತು ಎಲ್ಲಾ ಸೂಚನೆಗಳನ್ನು ತಮ್ಮ ಕಾರ್ಯಕರ್ತರಿಗೆ ನೀಡುವಂತೆ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾದಿಕಾರಿ ವಿದ್ಯಾ ಕುಮಾರಿ ಹಾಗೂ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.