ನಿಶಾ ಜೇಮ್ಸ್ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕಾರ

ಉಡುಪಿ: ಜಿಲ್ಲೆಯ ನೂತನ ಎಸ್ ಪಿ ಆಗಿ ನಿಶಾ ಜೇಮ್ಸ್ ಅವರು ಇಂದು ಅಧಿಕಾರ ಸ್ವೀಕರಿಸಿದರು.

ನಿರ್ಗಮನ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರು ಉಡುಪಿ ಎಸ್ಪಿ ಕಚೇರಿಯಲ್ಲಿ ಶನಿವಾರ ನೂತನ ಎಸ್ಪಿ ನಿಶಾ ಜೇಮ್ಸ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಆ ನಂತರ ಮಾತನಾಡಿದ ನೂತನ ಎಸ್ಪಿ ನಿಶಾ ಜೇಮ್ಸ್, ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಆದ್ಯತೆಯಾಗಿದೆ. ಅಕ್ರಮ ಚಟುವಟಿಕೆ, ಕೋಮು ಸಂಘರ್ಷ, ರೌಡಿಸಂಗಳ ವಿರುದ್ಧ ನಿಷ್ಪಕ್ಷವಾಗಿ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.
ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅದಕ್ಕಾಗಿ ಜನರ ಸಹಕಾರ ಮುಖ್ಯವಾಗಿ ಬೇಕು. ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷವಾಗಿ ಕೆಲಸ ಮಾಡಲಾಗುವುದು. ಅಧಿಕಾರಿಗಳು ಸಿಬ್ಬಂದಿಯೆಲ್ಲ ಸೇರಿ ಕೆಲಸ ಮಾಡಬೇಕಾಗುತ್ತದೆ. ಅದರಲ್ಲಿ ಯಶಸ್ವಿಯಾಗುತ್ತೇವೆ. ಫೋನ್ ಇನ್ ಕಾರ್ಯಕ್ರಮ ಸೇರಿದಂತೆ ಹಿಂದಿನ ಎಸ್ಪಿ ಮಾಡಿರುವ ಒಳ್ಳೆಯ ಕೆಲಸಗಳನ್ನು ಮುಂದುವರಿಸುವುದಾಗಿ ಅವರು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕುಮಾರಚಂದ್ರ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್, ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.