ಬಹು ಕೋಟಿ ಹಗರಣ: ಲಂಡನ್‌ನಲ್ಲಿ ಕಾಣಿಸಿಕೊಂಡ ನೀರವ್‌ ಮೋದಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಬಹು ಕೋಟಿ ಹಗರಣದಲ್ಲಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿ, ಲಂಡನ್‌ನ ಪ್ರತಿಷ್ಠಿತ ವೆಸ್ಟ್‌ಎಂಡ್‌ ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಡಂಬರದ ಜೀವನ ನಡೆಸುತ್ತಿದ್ದಾರೆ ಎಂದು ‘ದಿ ಟೆಲಿಗ್ರಾಫ್‌’ ಪತ್ರಿಕೆ ವರದಿ ಮಾಡಿದೆ.

ನೀರವ್ ಮೋದಿ ಲಂಡನ್‌ನಲ್ಲಿ ಮೂರು ಬೆಡ್‌ರೂಂಗಳ ಫ್ಲ್ಯಾಟ್‌ ಒಂದರಲ್ಲಿ ವಾಸವಾಗಿದ್ದು, ಅದರ ತಿಂಗಳ ವೆಚ್ಚ 17 ಸಾವಿರ ಪೌಂಡ್‌ಗಳಷ್ಟಾಗಳಾವೆ(ಅಂದಾಜು ₹ 15.64 ಲಕ್ಷ).

ಅದಲ್ಲದೆ ಗುರುತು ಸಿಗದಂತೆ ದಪ್ಪದಾಗಿ ಮೀಸೆ ಮತ್ತು ಕುರುಚಲು ಗಡ್ಡ ಬಿಟ್ಟಿರುವ ನೀರವ್, 10 ಸಾವಿರ ಪೌಂಡ್‌ (₹ 9.20 ಲಕ್ಷ) ದುಬಾರಿಯ ಆಸ್ಟ್ರಿಚ್‌ ಹೈಡ್‌ ಜಾಕೆಟ್‌ ಧರಿಸಿರುವ ವಿಡಿಯೊ ತುಣುಕೊಂದನ್ನು ಸಹ ಪತ್ರಿಕೆ ತನ್ನ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಲಂಡನ್‌ನಲ್ಲಿ ನೀರವ್‌ ಮೋದಿ ಹೊಸ ವಜ್ರದ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ವಾಚ್‌ಗಳು ಮತ್ತು ಚಿನ್ನಾಭರಣಗಳ ಸಗಟು ವ್ಯಾಪಾರಿ ಹಾಗೂ ವಿಶೇಷ ಮಳಿಗೆಗಳಲ್ಲಿ ವಾಚುಗಳು ಮತ್ತು ಚಿನ್ನಾಭರಣಗಳ ಚಿಲ್ಲರೆ ವ್ಯಾಪಾರಿ ಎಂದು ಇಂಗ್ಲೆಂಡ್‌ನ ಕಂಪನೀಸ್‌ ಹೌಸ್‌ ನಲ್ಲಿ ನೋಂದಣಿಯಾಗಿದೆ. ಆದರೆ ಈ ಹೊಸ ಉದ್ಯಮದ ನಿರ್ದೇಶಕರ ಪಟ್ಟಿ ಯಲ್ಲಿ ನೀರವ್‌ ಮೋದಿ ಹೆಸರಿಲ್ಲ ಎಂದು ತಿಳಿಸಿದೆ.

ಲಂಡನ್‌ನಲ್ಲಿ ವಾಸವಿರಲು ಅಲ್ಲಿನ ಸರ್ಕಾರದಿಂದ ಅನುಮತಿ ಪಡೆದುಕೊಳ್ಳ
ಲಾಗಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ‘ಸಾರಿ, ನೋ ಕಮೆಂಟ್ಸ್‌’ ಎಂದಷ್ಟೇ ನೀರವ್‌ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಪಾರ್ಟ್‌ಮೆಂಟ್‌ ಫಾರ್‌ ವರ್ಕ್‌ ಆ್ಯಂಡ್‌ ಪೆನ್ಶನ್‌ನಿಂದ ಮೋದಿಗೆ ನ್ಯಾಷನಲ್‌ ಇನ್ಶೂರೆನ್ಸ್‌ ಸಂಖ್ಯೆ ನೀಡಲಾಗಿದೆ. ಅಲ್ಲದೆ ಬ್ರಿಟಿಷ್‌ ಬ್ಯಾಂಕ್‌ ಖಾತೆಯನ್ನೂ ಬಳಸುತ್ತಿದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿ ಬ್ರಿಟನ್‌ನಲ್ಲಿ ಕೆಲಸ ಮಾಡಲು ಅನುಮತಿ ದೊರೆತಿದೆ. ಎಂದು ಮೂಲಗಳು ‘ಟೆಲಿಗ್ರಾಫ್‌’ ಪತ್ರಿಕೆಗೆ ತಿಳಿಸಿವೆ.