ನಿಫ್ಟಿ 51, ಸೆನ್ಸೆಕ್ಸ್​ 173 ಪಾಯಿಂಟ್​ ಏರಿಕೆ

ಮುಂಬೈ: ಭಾರತದ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಬುಧವಾರದ ವಹಿವಾಟು ಕೊನೆಗೊಳಿಸಿವೆ.30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 173.22 ಪಾಯಿಂಟ್ ಅಥವಾ ಶೇಕಡಾ 0.26 ರಷ್ಟು ಏರಿಕೆ ಕಂಡು 66,118.69 ಕ್ಕೆ ತಲುಪಿದೆ. ಸೂಚ್ಯಂಕವು ಬೆಳಗಿನ ವಹಿವಾಟಿನಲ್ಲಿ 65,549.96 ಕ್ಕೆ ಇಳಿದಿತ್ತು. ಆದಾಗ್ಯೂ, ರಿಲಯನ್ಸ್, ಎಲ್ &ಟಿ, ಇನ್ಫೋಸಿಸ್ ಮತ್ತು ಮಾರುತಿ ಷೇರುಗಳ ಖರೀದಿಯಲ್ಲಿನ ಹೆಚ್ಚಳವು ನಷ್ಟ ತುಂಬಲು ಸಹಾಯ ಮಾಡಿತು. ನಂತರ ಸೆನ್ಸೆಕ್ಸ್​ ದಿನದ ವಹಿವಾಟಿನಲ್ಲಿ 226.8 ಪಾಯಿಂಟ್ ಅಥವಾ ಶೇಕಡಾ 0.34 ರಷ್ಟು ಏರಿಕೆಯಾಗಿ 66,172.27 ಕ್ಕೆ ತಲುಪಿತ್ತು.

ರಿಲಯನ್ಸ್ ಇಂಡಸ್ಟ್ರೀಸ್, ಲಾರ್ಸೆನ್ ಮತ್ತು ಟೂಬ್ರೊ ಮತ್ತು ಐಟಿಸಿ ಷೇರುಗಳ ಖರೀದಿ ಭರಾಟೆ ಮತ್ತು ಏಷ್ಯಾ ಹಾಗೂ ಯುರೋಪಿಯನ್ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿಗಳ ನಂತರ ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ (ಸೆಪ್ಟೆಂಬರ್ 27) ಆರಂಭಿಕ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡು ಏರಿಕೆಯಲ್ಲಿ ಕೊನೆಯಾದವು.

ನಿಫ್ಟಿ 51.75 ಪಾಯಿಂಟ್ ಅಥವಾ ಶೇಕಡಾ 0.26 ರಷ್ಟು ಏರಿಕೆ ಕಂಡು 19,716.45 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು ಕನಿಷ್ಠ 19,554 ರಿಂದ ಗರಿಷ್ಠ 19,730.70 ರ ನಡುವೆ ಚಲಿಸಿತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​​ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಅಕ್ಟೋಬರ್ 4-6 ರಂದು ಸಭೆ ಸೇರಿ ಬಡ್ಡಿದರಗಳು ಮತ್ತು ನೀತಿ ನಿಲುವನ್ನು ನಿರ್ಧರಿಸಲಿದೆ. ಆರ್​ಬಿಐ ತನ್ನ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಿದೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ.

ಸೆನ್ಸೆಕ್ಸ್ ಷೇರುಗಳ ಪೈಕಿ ಲಾರ್ಸನ್ ಆಂಡ್ ಟರ್ಬೋ, ಐಟಿಸಿ, ಸನ್ ಫಾರ್ಮಾ, ಮಾರುತಿ, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಾಭ ಗಳಿಸಿದವು. ಟೈಟಾನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ನೆಸ್ಲೆ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಏರಿಕೆಯಲ್ಲಿ ಕೊನೆಗೊಂಡವು. ಯುರೋಪಿಯನ್ ಮಾರುಕಟ್ಟೆಗಳು ಹೆಚ್ಚಾಗಿ ಏರಿಕೆಯಲ್ಲಿಯೇ ವಹಿವಾಟು ನಡೆಸುತ್ತಿದ್ದವು. ಯುಎಸ್ ಮಾರುಕಟ್ಟೆಗಳು ಮಂಗಳವಾರ ಕೆಳಮಟ್ಟದಲ್ಲಿ ಕೊನೆಗೊಂಡವು. ಜಾಗತಿಕ ತೈಲ ಬೆಂಚ್​ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.98 ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 94.88 ಡಾಲರ್​ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 693.47 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.