ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಸೇನಾ ಟ್ರಕ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಐವರು ಯೋಧರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ.
ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್, ಸಿಪಾಯಿ ಸೇವಕ್ ಸಿಂಗ್, ಹವಾಲ್ದಾರ್ ಮನದೀಪ್ ಸಿಂಗ್, ಲ್ಯಾನ್ಸ್ ನಾಯಕ್ ದೇಬಶಿಶ್ ಬಸ್ವಾಲ್ ಹಾಗೂ ಸಿಪಾಯಿ ಹರಕೃಷ್ಣ ಸಿಂಗ್ ಮೃತಪಟ್ಟ ಯೋಧರು.
ಯೋಧರು ಸಾಗುತ್ತಿದ್ದ ಟ್ರಕ್ಗೆ ಎಲ್ಲಾ ಕಡೆಗಳಿಂದ ಎರಡು ಡಜನ್ಗೂ ಹೆಚ್ಚು ಬುಲೆಟ್ಗಳು ಹೊಡೆದಿದ್ದು, ಇದು ಹಲವಾರು ಭಯೋತ್ಪಾದಕರು ಏಕಕಾಲದಲ್ಲಿ ದಾಳಿ ಮಾಡಿರುವುದನ್ನು ಸೂಚಿಸುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಭಾರತೀಯ ಸೇನೆಯ ಟ್ರಕ್ನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ಪ್ರದೇಶದಲ್ಲಿ ಡ್ರೋನ್ ಕಣ್ಗಾವಲು ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ನಿಯೋಜಿಸಲಾದ ರಾಷ್ಟ್ರೀಯ ರೈಫಲ್ಸ್ ಘಟಕದ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಮಧ್ಯಾಹ್ನ 3 ಗಂಟೆಗೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಮತ್ತು ನಂತರ ಗ್ರೆನೇಡ್ ದಾಳಿಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಸೇನೆ ತಿಳಿಸಿದೆ.
ಗುರುವಾರದ ಭಯೋತ್ಪಾದಕ ದಾಳಿಯ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಜೊತೆಗೂಡಲಿದೆ. ಜಮ್ಮುವಿನಲ್ಲಿರುವ ಭಯೋತ್ಪಾದನಾ ನಿಗ್ರಹ ಘಟಕದ ತಂಡವೊಂದು ದಾಳಿ ಸ್ಥಳಕ್ಕೆ ತೆರಳಲಿದೆ. ಪೂಂಚ್ನ ಭಿಂಬರ್ ಗಲಿ ಪ್ರದೇಶದ ಬಳಿ ವಿಧಿವಿಜ್ಞಾನ ತಜ್ಞರ ತಂಡವೂ ಸೇರಿಕೊಳ್ಳಲಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎನ್.ಡಿ.ಟಿ.ವಿ ವರದಿ ತಿಳಿಸಿದೆ.
ಐವರು ಸೈನಿಕರ ಪೈಕಿ ನಾಲ್ವರು ಪಂಜಾಬ್ನವರಾಗಿದ್ದರೆ, ಒಬ್ಬ ಯೋಧ ಒಡಿಶಾದವರಾಗಿದ್ದಾರೆ.
ವೀರ ಸೈನಿಕರ ಪ್ರಾಣಹಾನಿಯಿಂದ ನನಗೆ ನೋವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. “ಈ ದುರಂತದ ಸಮಯದಲ್ಲಿ, ನನ್ನ ಸಹಾನುಭೂತಿ ದುಃಖಿತ ಕುಟುಂಬಗಳೊಂದಿಗೆ ಇವೆ” ಎಂದು ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ.
ಯೋಧರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಹೇಳಿದ್ದಾರೆ.