ಬೆಂಗಳೂರು: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ಉಗ್ರ ಶಾರಿಖ್‌ಗೆ ವಿಧಿಸಲಾದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ತೀರಾ ಕಡಿಮೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಭಿಪ್ರಾಯಪಟ್ಟಿದ್ದು, ಶಿಕ್ಷೆ ಹೆಚ್ಚಳಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.
ಶಾರಿಖ್ ಪ್ರಸ್ತುತ 27 ವರ್ಷದವನಾಗಿದ್ದು, ಈಗಾಗಲೇ ಮೂರು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದಾನೆ. ಹೀಗಾಗಿ ಉಳಿದಿರುವುದು ಕೇವಲ ಏಳು ವರ್ಷದ ಶಿಕ್ಷೆಯಷ್ಟೇ ಎಂಬುದನ್ನು ಎನ್ಐಎ ಉಲ್ಲೇಖಿಸಿದೆ.
ಶಿಕ್ಷೆ ಪೂರ್ಣಗೊಂಡ ಬಳಿಕ ಆತ ಸುಮಾರು 34ನೇ ವಯಸ್ಸಿನಲ್ಲಿ ಬಿಡುಗಡೆಗೊಳ್ಳಲಿದ್ದು, ಮತ್ತೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿ ಹಾಕಿಲ್ಲ. ಆತನ ಮನೋಭಾವದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಎನ್ನುವ ಅಂದಾಜಿನ ಮೇರೆಗೆ ಕನಿಷ್ಠ 20ರಿಂದ 30 ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಎನ್ಐಎ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.
ಏಪ್ರಿಲ್ 27ರಂದು ಎನ್ಐಎ ವಿಶೇಷ ನ್ಯಾಯಾಲಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121ಎ, 122, 326 ಹಾಗೂ ಯುಎಪಿಎ ಕಾಯ್ದೆಯ ವಿವಿಧ ಕಲಂಗಳಡಿ ಶಾರಿಖ್‌ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ತೀರ್ಪು ಪ್ರಕಟಿಸಿತ್ತು.

















