ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: ಕ್ಯಾಪ್ ನಿಂದ ದೊರೆಯಿತೇ ಆರೋಪಿಯ ಸುಳಿವು?

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಗೆ (NIA) ಸ್ಫೋಟಕ ಮಾಹಿತಿ ದೊರೆತಿದ್ದು, ಆರೋಪಿಗೂ ಚೆನ್ನೈಗೂ ಸಂಬಂಧ ಇದೆ ಎನ್ನಲಾಗಿದೆ.

ಸ್ಫೋಟದಿಂದ ಕೆಲ ದೂರದಲ್ಲಿ ಶಂಕಿತ ಆರೋಪಿ ತನ್ನ ಕ್ಯಾಪ್ ಬಿಟ್ಟು ಹೋಗಿದ್ದು, ಪೊಲೀಸರು ಈ ಕ್ಯಾಪ್‌ ಮೂಲವನ್ನು ಬೇಧಿಸಿದ್ದಾರೆ. ಇದನ್ನು ಆತ ಚೆನ್ನೈನ ಮಾಲ್‌ ಒಂದರಲ್ಲಿ ಖರೀದಿ ಮಾಡಿದ್ದ ಎನ್ನುವ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ ಎನ್ನಲಾಗಿದೆ.

ಚೆನ್ನೈನ ಮಾಲ್‌ನಲ್ಲಿ ಶಂಕಿತ ಟೋಪಿ ಖರೀದಿಸುತ್ತಿದ್ದ ವೇಳೆ ಆತನ ಜೊತೆ ಮತ್ತೊಬ್ಬ ವ್ಯಕ್ತಿ ಇರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿದೆ. ಇನ್ನು ಕ್ಯಾಪ್‌ ಅನ್ನು ಶಂಕಿತ ಹೆಚ್ಚು ಹೊತ್ತು ಬಳಸಿದ್ದ ಕಾರಣ ಅದರಲ್ಲಿ ಆತನ ಕೂದಲುಗಳಿದ್ದವು. ಇದನ್ನು ಡಿಎನ್‌ಎ ಪರೀಕ್ಷೆಗೆ ನೀಡಲಾಗಿದೆ ಎಂದು ಮಾಧ್ಯಮ ವರದಿಯಾಗಿದೆ.

ಈ ಆರೋಪಿಗಳು ಕರ್ನಾಟಕದವರೇ ಎಂದು ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಮಾಸಾವೀರ್‌ ಹಾಗೂ ಹುಸೇನ್‌ ಶಬೀದ್‌ ಇರಬಹುದು ಎಂದು ಹೇಳಲಾಗಿದೆ. ಇವರಿಬ್ಬರು ತಮಿಳುನಾಡಿಗೆ ತೆರಳಿ ಎರಡು ತಿಂಗಳು ಲಾಡ್ಜ್‌ನಲ್ಲಿ ಉಳಿದಿರುವ ಬಗ್ಗೆ ಮಾಹಿತಿ ದೊರೆತಿದೆ. ತಮಿಳುನಾಡಿನಲ್ಲಿ ಇವರು ಏನು ಮಾಡುತ್ತಿದ್ದರು, ಅಲ್ಲಿ ಯಾರ ಸಹಾಯ ಪಡೆದಿದ್ದರು ಎನ್ನುವ ಬಗ್ಗೆ ಹುಡುಕಾಟ ನಡೆಸಲಾಗುತ್ತಿದೆ.