ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಬಿ.ಕಿಶೋರ್ ಕುಮಾರ್ ಭೇಟಿ ಮಾಡಿದ ಮಧ್ವರಾಜ್: ಪ್ರಮೋದ್ ಗೆ ಕಿಶೋರ್ ಬೆಂಬಲ

ಕುಂದಾಪುರ: ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದ ಬಿ.ಕಿಶೋರ್ ಕುಮಾರ್ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಮತಯಾಚಿಸಿದರು.

ಗುರುವಾರ ಬೆಳಗ್ಗೆ ಕುಂದಾಪುರ ಕಲಾಕ್ಷೇತ್ರದ ಕಚೇರಿಗೆ ಆಗಮಿಸಿದ ಪ್ರಮೋದ್ ಅವರನ್ನು ಬಿ.ಕಿಶೋರ್ ಕುಮಾರ್ ಹಾಗೂ ಮಾಜಿ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ ಅವರು ಹಸ್ತಲಾಘವ ಕೊಟ್ಟು ಬರಮಾಡಿಕೊಂಡರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಪ್ರಮೋದ್ ಕೈಮುಗಿದು ಕೇಳಿಕೊಂಡರು.

ಬಳಿಕ ಮಾತನಾಡಿದ ಬಿ.ಕಿಶೋರ್ ಕುಮಾರ್, ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆನ್ನುವುದು ನಮ್ಮೆಲ್ಲರ ಕನಸು. ಕೇಂದ್ರಕ್ಕೆ ಮೋದಿ ಆದರೆ ಇಲ್ಲಿ ಒಬ್ಬ ಉತ್ತಮ ಅಭ್ಯರ್ಥಿಯನ್ನು ನಾವು ಬೆಂಬಲಿಸುತ್ತೇವೆ. ಪ್ರಮೋದ್ ಈ ಭಾಗದ ಸಂಸದರಾಗಿ ಆಯ್ಕೆಯಾಗಬೇಕು ಎಂದರು.

ಪಕ್ಷದವರೇ ನನ್ನನ್ನು ದೂರವಿಟ್ಟರು:

ಶೋಭಾ ಕರಂದ್ಲಾಜೆಯವರು ಮೊದಲ ಭಾರಿಗೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದ ವೇಳೆ ನಾವೇ ಅವರನ್ನು ಆನೆಗುಡ್ಡೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮತಭೇಟೆಗೆ ಚಾಲನೆಯನ್ನು ನೀಡಿದ್ದೆವು. ಪಕ್ಷದಲ್ಲಿ ಬೇಕಾದಷ್ಟು ಕೆಲಸಗಳನ್ನು ಮಾಡಿ ಯಾವುದೇ ಫಲಾಪೇಕ್ಷೆ ಇಲ್ಲದೆ ಹಗಲು ರಾತ್ರಿ ದುಡಿದಿದ್ದೇವೆ. ಆದರೆ ಇಂದು ಪಕ್ಷ ನಮ್ಮನ್ನು ಎಲ್ಲಾ ಚಟುವಟಿಕೆಗಳಿಂದಲೂ ದೂರ ಇಟ್ಟಿದೆ. ನಾನು ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಾಮಾಜಿಕ ಹೋರಾಟಗಳಲ್ಲೂ ಸಕ್ರಿಯನಾಗಿದ್ದೇನೆ. ನನ್ನೂರಿನ ಬಗ್ಗೆ ನಗಗೆ ಪ್ರೀತಿ, ಕಾಳಜಿ ಇದೆ. ಪಕ್ಷ ನನ್ನ ವಿರುದ್ದ ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ನನಗೆ ಚಿಂತೆ ಇಲ್ಲ. ಪಕ್ಷದಲ್ಲಿದ್ದುಕೊಂಡು ನಾನು ಊಟ ಮಾಡುತ್ತಿಲ್ಲ. ಪಕ್ಷ ನನ್ನ ಚಟುವಟಿಕೆಯ ಕೇಂದ್ರಬಿಂದುವಾಗಿತ್ತೆ ಹೊರತು ವ್ಯವಹಾರವಾಗಿರಲಿಲ್ಲ. ಮುಂದಿನ ಎಲ್ಲಾ ಕ್ರಮಕ್ಕೂ ನಾನು ಸಿದ್ದನಾಗಿದ್ದೇನೆ ಎಂದರು.

ಪ್ರಮೋದ್ ಭೇಟಿ ಖುಷಿ ನೀಡಿದೆ: 
ನಮ್ಮ ಪಕ್ಷದ ಅಭ್ಯರ್ಥಿ ನಮ್ಮ ಸಹಾಯ ಕೇಳಿ ಇದುವರೆಗೂ ಬಂದಿಲ್ಲ. ಓರ್ವ ಮಾಜಿ ಅಭ್ಯರ್ಥಿಯಾದ ನನ್ನ ಬಳಿಗೆ ಬಿಜೆಪಿ ಅಭ್ಯರ್ಥಿ ಬಂದು ಮಾತನಾಡಿಸಬೇಕಿತ್ತು. ಸಣ್ಣ ಗೌರವ ಕೊಡಬೇಕಿತ್ತು. ಅವರು ಆ ಕೆಲಸ ಮಾಡಿಲ್ಲ. ಆ ನೋವು ನನ್ನಲ್ಲಿದೆ. ಆದರೆ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ನಮ್ಮ ಬಳಿ ಬಂದು ಸಹಾಯ ಕೇಳಿದ್ದು ತುಂಬಾ ಖುಷಿ ನೀಡಿದೆ. ಓರ್ವ ಅಭ್ಯರ್ಥಿಯಾಗಿ ಮಾಡಬೇಕಾದ ಪ್ರಾಥಮಿಕ ಕೆಲಸ ಇದು. ಮೈತ್ರಿ ಅಭ್ಯರ್ಥಿ ನನ್ನ ಬಳಿ ಸಹಕಾರ ಕೇಳಿದ್ದರಿಂದ ವೈಯಕ್ತಿಕವಾಗಿ ಬೆಂಬಲ ನೀಡುವ ಆಲೋಚನೆ ಮಾಡಿದ್ದೇನೆ ಎಂದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜೆಡಿಎಸ್ ಕುಂದಾಪುರ ಕ್ಷೇತ್ರಾದ್ಯಕ್ಷ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ ಸಹಿತ ಎರಡೂ ಪಕ್ಷಗಳ ಮುಖಂಡರ ಜೊತೆ ಆಗಮಿಸಿ ಬಿಜೆಪಿ ಮುಖಂಡರಾದ ಕಿಶೋರ್ ಕುಮಾರ್ ಕುಂದಾಪುರ, ಮೆರ್ಡಿ ಸತೀಶ್ ಹೆಗ್ಡೆ, ಜಾನಕಿ ಬಿಲ್ಲವ ಸೇರಿಂದತೆ ಹಲವು ಮಂದಿ ಬಳಿ ಮತಯಾಚನೆ ನಡೆಸಿದರು. ಈ ವೇಳೆ ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಳಪಟ್ಟ ಮಾಜಿ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಕೂಡ ಇದ್ದರು.