ನ್ಯೂ ಉಡುಪಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಶುಭಾರಂಭ

ಉಡುಪಿ: ಕಲ್ಯಾಣಪುರ ಸಂತೆಕಟ್ಟೆಯ ಜಿಎಸ್‌ಜೆ ಗ್ಯಾಲಕ್ಸಿ ಕಾಂಪ್ಲೆಕ್ಸ್ ನಲ್ಲಿ ನ್ಯೂ ಉಡುಪಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸೋಮವಾರ ಶುಭಾರಂಭಗೊಂಡಿತು.

ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ ಎಸ್.ಕೆ ಅವರು, ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅನುಭವವುಳ್ಳ ತಂಡವನ್ನು‌ ಹೊಂದಿದ್ದು, ಕಾನೂನಾತ್ಮಕ ವಿಚಾರಗಳಲ್ಲಿಯೂ ಈ ತಂಡ ಉತ್ತಮವಾಗಿದೆ. ಈ ಸೊಸೈಟಿ ಎತ್ತರಕ್ಕೆ ಬೆಳೆದು ಹಲವಾರು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಿ ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ನೀಡುತ್ತಿದೆ. ಅವಿಭಜಿತ ದ.ಕ.ಜಿಲ್ಲೆ ರಾಷ್ಟ್ರೀಕೃತ ಬ್ಯಾಂಕ್ ಗಳ ತವರೂರಾಗಿತ್ತು. ಆದರೆ ಈಗ ಅವುಗಳು ವಿಲೀನಗೊಂಡಿರುವುದು ಬೇಸರದ ಸಂಗತಿಯಾಗಿದೆ. ಆ ಜಾಗವನ್ನು ಸಹಕಾರಿ ಸಂಸ್ಥೆಗಳು ತುಂಬುವ ಕೆಲಸ ಮಾಡಬೇಕಿದೆ ಎಂದರು.

ದೇಶದ ಆರ್ಥಿಕತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಸಹಕಾರಿ ಕ್ಷೇತ್ರವೂ ಉತ್ತಮ ಸೇವೆ ನೀಡುತ್ತಿದೆ. ದೇಶ-ವಿದೇಶದಲ್ಲಿ 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಸ್ಥೆಗಳಿವೆ. ಕರಾವಳಿ ಭಾಗದ ಜನರು ಸಹಕಾರಿ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಕೇಂದ್ರ ಸರಕಾರವೂ ಸಚಿವಾಲಯ ಸ್ಥಾಪಿಸಿ ಜನರಿಗೆ ವಿಶ್ವಾಲಸ ಮೂಡಿಸಿದ್ದಾರೆ ಎಂದು ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ಹೇಳಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವೃತ್ತಿಪರ ನಿರ್ದೇಶಕ ಬೋಳ ಸದಾಶಿವ ಶೆಟ್ಟಿ, ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಕಾಮತ್, ಸಂಹಿತ ಸೌಹಾರ್ದ ಸಹಕಾರ ಸೊಸೈಟಿಯ ಅಧ್ಯಕ್ಷ ಬೆಲ್ಮಾರು ರಾಘವೇಂದ್ರ ಭಟ್, ನಗರಸಭೆ ಸದಸ್ಯೆ ಮಂಜುಳಾ ಪಿ.ನಾಯಕ್ ಶುಭಹಾರೈಸಿದರು.

ಅಧ್ಯಕ್ಷ ವಿಜಯೇಂದ್ರ ಶೆಟ್ಟಿ, ಉಪಾಧ್ಯಕ್ಷ ಹೇಮರಾಜು ಡಿ.ಅಮೀನ್, ನಿರ್ದೇಶಕರಾದ ಎಂ.ವಿಟ್ಠಲ ಶೆಟ್ಟಿ, ಎನ್.ಶೇಖರ ಸುವರ್ಣ, ರವಿನಾಥ ಶೆಟ್ಟಿ, ರವೀಂದ್ರ ಎಸ್.ಕೋಟ್ಯಾನ್, ಸದಾನಂದ ಶೆಟ್ಟಿ, ಸಂಪತ್, ಸಂತೋಷ್ ನಾಯಕ್, ಶ್ರೀನಿವಾಸ ಶೆಟ್ಟಿ, ಸುರೇಖಾ, ಅನಿಲ್ ಬಿ.ರೋಡ್ರಿಗಸ್, ವಿಟ್ಠಲ್ ಡಿ.ಶೆಟ್ಟಿ, ಯಶ್ವಂತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕಾಮತ್ ಉಪಸ್ಥಿತರಿದ್ದರು. ಸತೀಶ್‌ಚಂದ್ರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.