ಅಹಮದಾಬಾದ್: ಇತ್ತೀಚೆಗೆ ನಡೆದ, ದೋಸೆ ಹಿಟ್ಟು ತಿಂದ ಬಳಿಕ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಸಾವನಪ್ಪಿದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ತಾಯಿಯ ಡೈರಿಯಲ್ಲಿ ದೊರೆತ ಮಾಹಿತಿಯ ಆಧಾರದಲ್ಲಿ ಪ್ರಕರಣದ ಅಸಲಿ ಸತ್ಯ ಬಹಿರಂಗವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿವರ
ಏಪ್ರಿಲ್ 1ರಂದು ಸ್ಥಳೀಯ ಮಾರಾಟಗಾರನಿಂದ ದೋಸೆ ಹಿಟ್ಟು ಖರೀದಿಸಿ ಮನೆಯಲ್ಲಿ ದೋಸೆ ಮಾಡಿ ತಿಂದಿದ್ದರು. ದೋಸೆ ತಿಂದ ಕೆಲವೇ ಸಮಯದಲ್ಲಿ ಅಜ್ಜಿ ಹಾಗೂ ಇಬ್ಬರು ಹೆಣ್ಣುಮೊಮ್ಮಕ್ಕಳಿಗೆ ತೀವ್ರ ವಾಂತಿ ಆರಂಭವಾಗಿ, ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ, ಏಪ್ರಿಲ್ 3ರಂದು 3 ತಿಂಗಳ ಶಿಶು ಮೃತಪಟ್ಟಿತು. ನಂತರ 4 ವರ್ಷದ ಇನ್ನೊಂದು ಮಗು ಕೂಡ ಸಾವನಪ್ಪಿತು.
ಪ್ರಾರಂಭದಲ್ಲಿ ಸ್ಥಳೀಯ ಅಂಗಡಿಯಿಂದ ತರಲಾದ ರೆಡಿಮೇಡ್ ದೋಸೆ ಹಿಟ್ಟು ವಿಷಕಾರಿ ಆಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ನಂತರದ ತನಿಖೆಯಲ್ಲಿ ಅದೇ ಹಿಟ್ಟನ್ನು ಬಳಸಿದ ಇತರ ಗ್ರಾಹಕರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಪೊಲೀಸರು ತಾಯಿಗೆ ಸೇರಿದ ಡೈರಿಯನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಕೆಲವು ಸ್ಪೋಟಕ ಮಾಹಿತಿಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. ಜೊತೆಗೆ ವೈದ್ಯಕೀಯ ಪರೀಕ್ಷೆಯಲ್ಲಿ ಅಲ್ಯೂಮಿನಿಯಂ ಫಾಸ್ಫೈಡ್ ಎಂಬ ವಿಷಕಾರಿ ರಾಸಾಯನಿಕದ ಅಂಶಗಳು ಪತ್ತೆಯಾಗಿವೆ.
ಡೈರಿಯಲ್ಲಿ ಏನಿತ್ತು?
ಈ ಎರಡು ಹೆಣ್ಣು ಮಕ್ಕಳ ತಾಯಿ ಡೈರಿಯಲ್ಲಿ ಬರೆದುಕೊಂಡಿರುವಂತೆ ಆಕೆ ಗಂಡು ಮಗುವನ್ನು ಬಯಸಿದ್ದಳು ಹಾಗೂ ಆ ಆಸೆ ಈಡೇರಿದರೆ ದೇವಸ್ಥಾನಕ್ಕೆ ಬರುತ್ತೇನೆ ಎಂದು ಹರಕೆ ಹೇಳಿಕೊಂಡಿದ್ದಳು. ಈ ಆಸೆ ನೆರವೇರದಿದ್ದರಿಂದಾಗಿ ಆಕೆಯೇ ಹಿಟ್ಟಿನಲ್ಲಿ ವಿಷ ಬೆರಸಿ ಮಕ್ಕಳಿಗೆ ನೀಡಿದ್ದಾಳೆ, ತಾನೂ ಸೇವಿಸಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎನ್ನಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ಇದು ಸಾಮಾನ್ಯ ಆಹಾರ ವಿಷಬಾಧೆ ಪ್ರಕರಣವಲ್ಲ, ಬದಲಾಗಿ ಉದ್ದೇಶಿತ ವಿಷಪ್ರಯೋಗದ ಸಾಧ್ಯತೆಯತ್ತ ತನಿಖೆ ಮುಂದುವರಿದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

















