ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕರ್ನಾಟಕ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಇದೀಗ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದೆ. ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ 2,000 ರೂ. ಜಮೆ ಮಾಡುವ ಈ ಯೋಜನೆಯಲ್ಲಿ ಅನರ್ಹರು ಹಾಗೂ ಮೃತಪಟ್ಟವರ ಹೆಸರಿನಲ್ಲಿ ಹಣ ಹೋಗುತ್ತಿರುವ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಇನ್ನು ಮುಂದೆ ಯೋಜನೆಯ ಎಲ್ಲಾ ಫಲಾನುಭವಿಗಳು ‘ಒನ್-ಟೈಮ್ ಬಯೋಮೆಟ್ರಿಕ್’ ಮರು-ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಲಿದೆ. ಜೊತೆಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಖಾತೆಗೆ ಜೋಡಣೆ ಮಾಡಬೇಕಾಗುತ್ತದೆ. ಸರ್ಕಾರ ನಿಗದಿಪಡಿಸುವ ಅವಧಿಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಮುಂದಿನ ತಿಂಗಳಿಂದ ಗೃಹಲಕ್ಷ್ಮಿ ಹಣ ಜಮೆಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾಹಿತಿ ಪ್ರಕಾರ, ಯೋಜನೆಯಲ್ಲಿ ಹಲವು ಲೋಪಗಳು ಬೆಳಕಿಗೆ ಬಂದಿವೆ. ಲಕ್ಷಾಂತರ ಫಲಾನುಭವಿಗಳಲ್ಲಿ ಸುಮಾರು ಎರಡು ಲಕ್ಷ ಮಂದಿ ಈಗಾಗಲೇ ಮೃತಪಟ್ಟಿದ್ದರೂ ಅವರ ಖಾತೆಗೆ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ. ಅಲ್ಲದೆ 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿದಾರರು ಅನರ್ಹರಾಗಿದ್ದರೂ ಯೋಜನೆಯ ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಕೆಲವು ಮಹಿಳೆಯರ ಖಾತೆಗೆ ಬರುವ ಗೃಹಲಕ್ಷ್ಮಿ ಹಣವು ಬ್ಯಾಂಕ್ ಸಾಲಗಳಿಗೆ ನೇರವಾಗಿ ಕಡಿತವಾಗುತ್ತಿರುವುದು ಹಾಗೂ ಹಲವು ಫಲಾನುಭವಿಗಳ ಮೊಬೈಲ್ ಸಂಖ್ಯೆಗಳು ಬದಲಾಗಿರುವ ಕಾರಣ ಮಾಹಿತಿ ತಲುಪದ ಸಮಸ್ಯೆಯೂ ಕಂಡುಬಂದಿದೆ. ಈ ಎಲ್ಲಾ ಗೊಂದಲ ನಿವಾರಣೆಗಾಗಿ ಸರ್ಕಾರ ಖಾತೆಗಳ ಸಮಗ್ರ ಮರು-ಪರಿಶೀಲನೆಗೆ ಮುಂದಾಗಿದೆ.
ಬಯೋಮೆಟ್ರಿಕ್ ನವೀಕರಣ ಹೇಗೆ?
ಫಲಾನುಭವಿಗಳು ತಮ್ಮ ಹತ್ತಿರದ: ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ:
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ನೀಡಬೇಕು
- ಬೆರಳಚ್ಚು (ಬಯೋಮೆಟ್ರಿಕ್) ನೀಡಬೇಕು
- ಖಾತೆಯನ್ನು ಮರು-ನೋಂದಣಿ ಮಾಡಿಸಿಕೊಳ್ಳಬೇಕು
- ಮಹಿಳೆಯರು ಕೇವಲ ಒಂದು ಬಾರಿ ಬಯೋಮೆಟ್ರಿಕ್ ನೀಡಿದರೆ ಸಾಕು. ನವೀಕರಣ ಮಾಡದ ಖಾತೆಗಳು ಮಾತ್ರ ಸ್ವಯಂಚಾಲಿತವಾಗಿ ರದ್ದಾಗಲಿವೆ.
ಯಾರಿಗೆ ಗೃಹಲಕ್ಷ್ಮಿ ಸಿಗುವುದಿಲ್ಲ?
- ಆದಾಯ ತೆರಿಗೆ ಪಾವತಿದಾರರಿಗೆ ಯೋಜನೆ ಅನ್ವಯಿಸುವುದಿಲ್ಲ
- ನಿಯಮ ಉಲ್ಲಂಘಿಸಿರುವ ಬಿಪಿಎಲ್ ಕಾರ್ಡ್ಗಳನ್ನು ಈಗಾಗಲೇ ಎಪಿಎಲ್ಗೆ ವರ್ಗಾವಣೆ ಮಾಡಲಾಗಿದೆ
- ಅನರ್ಹ ಫಲಾನುಭವಿಗಳ ಖಾತೆಗಳನ್ನು ಹಂತ ಹಂತವಾಗಿ ರದ್ದುಪಡಿಸಲಾಗುತ್ತದೆ
- ಸರ್ಕಾರ ಶೀಘ್ರದಲ್ಲೇ ಈ ಕುರಿತು ಅಧಿಕೃತ ಆದೇಶ ಮತ್ತು ಸಂಪೂರ್ಣ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆಯಿದೆ.

















