ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಹಣದ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಫಲಾನುಭವಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಮುಂದಿನ ತಿಂಗಳಿನಿಂದ ಬಯೋಮೆಟ್ರಿಕ್ ಪ್ರಕ್ರಿಯೆ ಆರಂಭವಾಗಲಿದೆ.
ಪ್ರಸ್ತಾವಿತ ವ್ಯವಸ್ಥೆಯಂತೆ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಬಯೋಮೆಟ್ರಿಕ್ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಬಯೋಮೆಟ್ರಿಕ್ ಪೂರ್ಣಗೊಳಿಸದಿದ್ದರೆ ಯೋಜನೆಯಡಿ ನೀಡಲಾಗುವ ಮಾಸಿಕ ₹2,000 ಆರ್ಥಿಕ ಸಹಾಯಧನ ಪಡೆಯಲು ತೊಂದರೆಯಾಗಬಹುದು ಎನ್ನಲಾಗಿದೆ.
ಬಯೋಮೆಟ್ರಿಕ್ ನೋಂದಣಿಗಾಗಿ ಪ್ರತಿ ಫಲಾನುಭವಿಯಿಂದ ₹5 ಶುಲ್ಕ ವಸೂಲಿ ಮಾಡುವ ಪ್ರಸ್ತಾಪವೂ ಸರ್ಕಾರದ ಪರಿಶೀಲನೆಯಲ್ಲಿದೆ. ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ “ಗೃಹಲಕ್ಷ್ಮಿ ಸೊಸೈಟಿ” ಸದಸ್ಯತ್ವ ಅಭಿಯಾನವನ್ನೂ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.
ಸೊಸೈಟಿ ಸದಸ್ಯತ್ವ ಪಡೆಯಲು ಆಸಕ್ತರಾಗಿರುವ ಫಲಾನುಭವಿಗಳು ₹1,250 ಪಾವತಿಸಬೇಕಾಗುತ್ತದೆ. ಸದಸ್ಯತ್ವ ಪಡೆಯಲು ಇಚ್ಛಿಸದವರು ಕೇವಲ ಬಯೋಮೆಟ್ರಿಕ್ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಈ ಯೋಜನೆ ಜಾರಿಗೆ ಅಗತ್ಯವಾದ ಮೊಬೈಲ್ ಆಪ್ ಅಭಿವೃದ್ಧಿ ಕಾರ್ಯ ಈಗಾಗಲೇ ನಡೆಯುತ್ತಿದ್ದು, ಮುಂದಿನ ತಿಂಗಳೊಳಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

















