ಬೆಂಗಳೂರು: ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ ಅಡುಗೆಮನೆಗಳ ನಿರ್ವಹಣೆಗೆ ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳು ಜಾರಿಗೆ ಬರುವ ಸಾಧ್ಯತೆ ಇದೆ. ಜನರ ಆರೋಗ್ಯದ ದೃಷ್ಟಿಯಿಂದ ಆಹಾರ ಸುರಕ್ಷತಾ ಇಲಾಖೆ ಹೊಸ ನಿಯಮಗಳನ್ನು ರೂಪಿಸುತ್ತಿದ್ದು, ಅವಧಿ ಮೀರಿದ ಆಹಾರ, ಫಂಗಸ್ ಹಿಡಿದ ತರಕಾರಿ ಹಾಗೂ ಹಾಳಾದ ಮಾಂಸ ಮತ್ತು ಹಾಲಿನ ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕುವುದು ಇದರ ಪ್ರಮುಖ ಉದ್ದೇಶವಾಗಿದೆ.
ಇತ್ತೀಚೆಗೆ ನಡೆದ ಆಹಾರ ಸುರಕ್ಷತಾ ತಪಾಸಣೆ ವೇಳೆ ಹಲವು ಹೋಟೆಲ್ಗಳ ಕಿಚನ್ಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಫಂಗಸ್ ಹಿಡಿದ ತರಕಾರಿಗಳು, ಹಾಳಾದ ಮಾಂಸ ಮತ್ತು ಹಾಲಿನ ಉತ್ಪನ್ನಗಳು ಪತ್ತೆಯಾಗಿದ್ದವು. ಬೆಂಗಳೂರಿನಲ್ಲಿ ನಡೆದ ವಿಶೇಷ ತಪಾಸಣೆಯಲ್ಲಿ 60ಕ್ಕೂ ಹೆಚ್ಚು 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್ಗಳನ್ನು ಪರಿಶೀಲಿಸಿ, 1,000 ಕೆಜಿಗೂ ಅಧಿಕ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳ ಮಾಹಿತಿ ಆಧರಿಸಿ ವರದಿಯಾಗಿದೆ.
ಹೊಸ ಮಾರ್ಗಸೂಚಿಯಲ್ಲಿ ಏನೇನಿರಲಿದೆ?
ಹೊಸ ನಿಯಮಗಳಲ್ಲಿ ಆಹಾರ ಪದಾರ್ಥಗಳ ಸಂಗ್ರಹಣೆ, ಬಳಕೆ ಹಾಗೂ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ಮಾನದಂಡಗಳನ್ನು ನಿಗದಿಪಡಿಸುವ ಸಾಧ್ಯತೆ ಇದೆ.
- ತರಕಾರಿ ಮತ್ತು ಇತರ ಕಚ್ಚಾ ಪದಾರ್ಥಗಳನ್ನು ಹೇಗೆ ಸಂಗ್ರಹಿಸಬೇಕು?
- ಆಹಾರವನ್ನು ಎಷ್ಟು ಸಮಯದವರೆಗೆ ಸಂಗ್ರಹಿಸಬಹುದು?
- ಫ್ರೋಜನ್ ಆಹಾರವನ್ನು ಹೇಗೆ ಸಂಗ್ರಹಿಸಬೇಕು ಮತ್ತು ಡಿಫ್ರಾಸ್ಟ್ ಮಾಡಬೇಕು?
- ಮೊಸರು, ಚೀಸ್, ಬೆಣ್ಣೆ ಸೇರಿದಂತೆ ಡೈರಿ ಉತ್ಪನ್ನಗಳ ನಿರ್ವಹಣೆ ಹೇಗಿರಬೇಕು?
- ಅಡುಗೆ ಎಣ್ಣೆಯನ್ನು ಎಷ್ಟು ಬಾರಿ ಬಳಸಬಹುದು?
- ಅವಧಿ ಮೀರಿದ ಹಾಗೂ ಹಾಳಾದ ಆಹಾರವನ್ನು ಹೇಗೆ ವಿಲೇವಾರಿ ಮಾಡಬೇಕು?
ಈ ಎಲ್ಲ ಅಂಶಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ರೂಪಿಸಲಾಗುತ್ತಿದೆ.

ಫ್ರೋಜನ್ ಆಹಾರಕ್ಕೂ ಕಟ್ಟುನಿಟ್ಟಿನ ನಿಯಮ
ಫ್ರೋಜನ್ ಆಹಾರವನ್ನು ಸಂಗ್ರಹಿಸುವ ವಿಧಾನ ಹಾಗೂ ಡಿಫ್ರಾಸ್ಟಿಂಗ್ ಪ್ರಕ್ರಿಯೆಗೆ ನಿರ್ದಿಷ್ಟ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಒಮ್ಮೆ ಕರಗಿಸಿದ ಫ್ರೋಜನ್ ಆಹಾರವನ್ನು ಮತ್ತೆ ಫ್ರೀಜ್ ಮಾಡಿ ಬಳಸುವುದಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.
ಅದೇ ರೀತಿ ಕೊಳೆತ ಅಥವಾ ಫಂಗಸ್ ಹಿಡಿದ ತರಕಾರಿಗಳನ್ನು ಅಡುಗೆಗೆ ಬಳಸುವುದಕ್ಕೂ ಕಡಿವಾಣ ಹಾಕಲಾಗುತ್ತದೆ. ಮೊಸರು, ಚೀಸ್, ಬೆಣ್ಣೆ ಸೇರಿದಂತೆ ಡೈರಿ ಉತ್ಪನ್ನಗಳ ಸಂಗ್ರಹಣೆ ಮತ್ತು ಬಳಕೆಗೂ ಪ್ರತ್ಯೇಕ ಮಾನದಂಡಗಳನ್ನು ನಿಗದಿಪಡಿಸುವ ಸಾಧ್ಯತೆ ಇದೆ.
ಅಡುಗೆ ಎಣ್ಣೆ ಮರುಬಳಕೆಗೂ ನಿಗಾ
ಹೋಟೆಲ್ಗಳಲ್ಲಿ ಅಡುಗೆ ಎಣ್ಣೆಯ ಮರುಬಳಕೆಯ ಮೇಲೂ ಆಹಾರ ಸುರಕ್ಷತಾ ಇಲಾಖೆ ನಿಗಾ ವಹಿಸಲಿದೆ. FSSAI ಮಾನದಂಡದ ಪ್ರಕಾರ ಬಳಸಿದ ಅಡುಗೆ ಎಣ್ಣೆಯಲ್ಲಿನ Total Polar Compounds (TPC) ಪ್ರಮಾಣ ಶೇ.25ಕ್ಕಿಂತ ಹೆಚ್ಚಿರಬಾರದು.
ಕಚ್ಚಾ ಮತ್ತು ಬೇಯಿಸಿದ ಆಹಾರ ಪ್ರತ್ಯೇಕ
ಕಚ್ಚಾ, ಅರೆಬೇಯಿಸಿದ ಹಾಗೂ ಸಂಪೂರ್ಣವಾಗಿ ಬೇಯಿಸಿದ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಕಡ್ಡಾಯವಾಗುವ ಸಾಧ್ಯತೆ ಇದೆ. ವೆಜ್ ಮತ್ತು ನಾನ್ವೆಜ್ ಆಹಾರಗಳ ಸಂಗ್ರಹಣೆ ಹಾಗೂ ನಿರ್ವಹಣೆಯಲ್ಲೂ ಪ್ರತ್ಯೇಕ ವ್ಯವಸ್ಥೆ ಇರಬೇಕು.
ಕಚ್ಚಾ ಮಾಂಸ ಮತ್ತು ಮೀನು ಸೇರಿದಂತೆ ಪ್ರಾಣಿಜನ್ಯ ಆಹಾರವನ್ನು 4°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಬಿಸಿ ಆಹಾರವನ್ನು 65°Cಕ್ಕಿಂತ ಹೆಚ್ಚು, ನಾನ್ವೆಜ್ ಆಹಾರವನ್ನು 70°C, ಶೀತ ಆಹಾರವನ್ನು 5°C ಅಥವಾ ಅದಕ್ಕಿಂತ ಕಡಿಮೆ ಹಾಗೂ ಫ್ರೋಜನ್ ಆಹಾರವನ್ನು -18°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಇರಿಸುವ ಮಾನದಂಡಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಆಹಾರವನ್ನು ಮರುಬಿಸಿ ಮಾಡುವಾಗ ಅದರ ಒಳಭಾಗದ ತಾಪಮಾನ 75°C ತಲುಪಬೇಕು.
ನಿಯಮ ಉಲ್ಲಂಘಿಸಿದರೆ ಕ್ರಮ
ಹೊಸ ಮಾರ್ಗಸೂಚಿಗಳು ಜಾರಿಗೆ ಬಂದ ಬಳಿಕ ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ ಕಿಚನ್ಗಳಲ್ಲಿ ನಿಯಮ ಪಾಲನೆಯ ಬಗ್ಗೆ ಕಟ್ಟುನಿಟ್ಟಿನ ತಪಾಸಣೆ ನಡೆಯುವ ಸಾಧ್ಯತೆ ಇದೆ. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.















