ಉದ್ಯೋಗ ಮಾಡಲು ಸಾಮರ್ಥ್ಯ ಇಲ್ಲದ ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ:ಕೇಂದ್ರದ ನಿಯಮ

ನವದೆಹಲಿ: ತಮ್ಮ ಉದ್ಯೋಗವನ್ನು ಮಾಡಲು ಸಾಮರ್ಥ್ಯ ಇಲ್ಲದ ಸರಕಾರಿ ಉದ್ಯೋಗಿಗಳ ಸೇವೆ ಕೊನೆಗೊಳಿಸಲು ಕೇಂದ್ರ ಸರಕಾರ  ಹೊಸ ನಿಯಮ ತರಲು ಸಿದ್ದತೆ ನಡೆಸಿದೆ . ಕಳೆದ ತಿಂಗಳು ತೆರಿಗೆ ಇಲಾಖೆಯ ಪ್ರಿನ್ಸಿಪಾಲ್ ಹಾಗೂ ಚೀಫ್ ಕಮಿಷನರ್ ಗಳನ್ನು ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಮಾಡಲಾಯಿತು. ಆದರಲ್ಲಿ ಹಲವರ ವಿರುದ್ಧ ದೂರುಗಳು ಹಾಗೂ ಭ್ರಷ್ಟಾಚಾರದ ಪ್ರಕರಣಗಳು ಬಾಕಿ ಇವೆ. ಒಂದು ಪ್ರಕರಣದಲ್ಲಿ ಸೇವೆಯಿಂದ ನಿವೃತ್ತರಾದ ತೆರಿಗೆ ಅಧಿಕಾರಿ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ.

ವರದಿ ಸಲ್ಲಿಸಲು ಆದೇಶ:

12 ಐಟಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದ ಕೇಂದ್ರಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ಇತ್ತೀಚಿನ ಆದೇಶದ ಪ್ರಕಾರ, ಎಷ್ಟು ಮಂದಿ ನಿವೃತ್ತರಾಗುತ್ತಿದ್ದಾರೆ ಎಂದು ಪ್ರತಿ ತಿಂಗಳೂ ವರದಿ ಕಳುಹಿಸಬೇಕು. ಜತೆಗೆ ಎಷ್ಟು ಮಂದಿ ಕೆಲಸದ ಸಾಮರ್ಥ್ಯವನ್ನು ಅಳೆಯಲಾಗಿದೆ ಎಂಬುದನ್ನು ದಾಖಲಿಸಬೇಕು. ಎಲ್ಲ ಸಚಿವಾಲಯ ಅಥವಾ ಇಲಾಖೆಯಿಂದ ಈ ಬಗ್ಗೆ ವರದಿಯನ್ನು ಪ್ರತಿ ತಿಂಗಳ ಹದಿನೈದನೇ ತಾರೀಕಿನ ಒಳಗೆ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ಸಲ್ಲಿಸಬೇಕು. ಈ ನಿಯಮ ಜುಲೈ ಒಂದರಿಂದ ಜಾರಿಗೆ ಬಂದಿದೆ. ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ವರದಿ ನೇರವಾಗಿ ಪ್ರಧಾನಿ ಕಾರ್ಯಾಲಯಕ್ಕೆ ತಲುಪುತ್ತದೆ. ಕೇಂದ್ರ ಸರಕಾರಿ ಸಿಬ್ಬಂದಿ ನೇಮಕಾತಿ, ತರಬೇತಿ, ವೃತ್ತಿ ಬೆಳವಣಿಗೆ ಹಾಗೂ ನಿವೃತ್ತಿ ವಿಚಾರಗಳನ್ನು ತಿಳಿಸಲಾಗುತ್ತದೆ. ಯಾವ ಸಿಬ್ಬಂದಿಯನ್ನು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಬೇಕೋ ಅಂಥವರನ್ನು ಹಾಗೆ ಮಾಡುವ ಹಕ್ಕು ಸರಕಾರಕ್ಕೆ ಇದೆ ಎಂದು ತಿಳಿಸಲಾಗಿದೆ. ಸದ್ಯದಲ್ಲೇ ಈ ನಿಯಮ ಜಾರಿಗೆಯಾಗಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.