ಉಭಯ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರ ನೇಮಕ: ದ.ಕ ಜಿಲ್ಲೆಗೆ ಸತೀಶ್ ಕುಂಪಲ; ಉಡುಪಿಗೆ ಕಿಶೋರ್ ಕುಮಾರ್ ಸಾರಥ್ಯ

ಮಂಗಳೂರು/ಉಡುಪಿ: ಬಿಜೆಪಿಯ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹಾಗೂ ಉಡುಪಿ ಘಟಕದ ಅಧ್ಯಕ್ಷರಾಗಿ ಬಿಜೆಪಿಯ ಮಾಜಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಕುಂಪಲ ಅವರು ಈ ಹಿಂದೆ ಮೂರು ಬಾರಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದರು ಮತ್ತು ನಂತರ ಬಿಜೆಪಿ ಉಳ್ಳಾಲ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

ಕಿಶೋರ್ ಕುಮಾರ್ ಹಿಂದೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕುಂದಾಪುರ ಮಂಡಲ ಬಿಜೆಪಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ರಾಜ್ಯ ಮೀನುಗಾರಿಕೆ ಪ್ರಕೋಷ್ಠದ ಸಂಚಾಲಕರಾಗಿ, ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂದರ್ಭ ಭಟ್ಕಳ ಸಹಿತ ವಿವಿಧ ಕ್ಷೇತ್ರಗಳ ಉಸ್ತುವಾರಿಯಾಗಿ, ಬೈಂದೂರು ವಿಧಾನಸಭೆ ಕ್ಷೇತ್ರ ಪ್ರಭಾರಿ ಸಹಿತ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ್ದರು.

ಲೋಕಸಭೆ ಚುನಾವಣೆಗೂ ಮೊದಲು ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವುದು ಮೊದಲ ಆದ್ಯತೆ ಎಂದು ಸತೀಶ್ ಕುಂಪಲ ಹಾಗೂ ಕಿಶೋರ್ ಕುಮಾರ್ ಹೇಳಿದ್ದಾರೆ.