ಕೆಮ್ಮಣ್ಣು: ಗಣಪತಿ ಸಹಕಾರಿ ವ್ಯವಸಾಯಕ ಸಂಘದ ನೂತನ ಕಟ್ಟಡ ‘ಸಹಕಾರ ಸದನ’ ಉದ್ಘಾಟನೆ

ಕೆಮ್ಮಣ್ಣು: ನೂರು ವರ್ಷಗಳ ಇತಿಹಾಸವಿರುವ ಗಣಪತಿ ಸಹಕಾರಿ ವ್ಯವಸಾಯಕ ಸಂಘದ ನೂತನ ಕಟ್ಟಡ ‘ಸಹಕಾರ ಸದನ’ ವನ್ನು ಬಡಾನಿಡಿಯೂರು ಗ್ರಾಮದಲ್ಲಿ ಶನಿವಾರದಂದು ಉದ್ಘಾಟಿಸಲಾಯಿತು.

ನೂತನ ಕಟ್ಟಡವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಉದ್ಘಾಟಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ದೀಪ ಬೆಳಗಿಸಿದರು.

ಸೈಂಟ್ ಆನ್ಸ್ ಚರ್ಚಿನ ಧರ್ಮಗುರುಗಳಾದ ರೆ.ಫಾ ಡೆನಿಸ್ ಡೇಸಾ ಹವಾನಿಯಂತ್ರಿತ ಕಟ್ಟಡವನ್ನು ಉದ್ಘಾಟಿಸಿದರು.

ಭದ್ರತಾ ಕೊಠಡಿಯನ್ನು ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.

ಬ್ಯಾಂಕಿನ ಗೋದಾಮನ್ನು ಮುಂಬೈ ಉದ್ಯಮಿ ಅಶೋಕ್ ಕೋಟ್ಯಾನ್ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿ ಮಾತನಾಡಿ, ಬಡಾನಿಡಿಯೂರಿನಂತಹ ಒಂದು ಸಣ್ಣ ಗ್ರಾಮದಲ್ಲಿ ವಿಶೇಷ ಚಟುವಟಿಗಳು ನಡೆಯುತ್ತಿವೆ. ನೂತನ ಕಟ್ಟಡವು ಗ್ರಾಮದ ಕಿರೀಟಕ್ಕೆ ಹೊಸ ತುರಾಯಿಯಂತಿದೆ. ಹಣದ ಅವಶ್ಯಕತೆ ಎಲ್ಲರಿಗೂ ಇರುತ್ತದೆ. ಆದರೆ ಸಾಲಬೇಕೆಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋದಾಗ ಹಲವಾರು ದಾಖಲೆಗಳನ್ನು ಕೇಳುತ್ತಾರಾದುದರಿಂದ ಸಾಲ ಪಡೆಯುವುದು ದುಸ್ತರವಾಗುತ್ತದೆ. ಸಹಕಾರಿ ಬ್ಯಾಂಕ್ಗ್ ಗಳು ದಾಖಲೆಗಳ ಕಿರಿಕಿರಿ ಇಲ್ಲದೆ, ಕಡಿಮೆ ಅವಧಿಯಲ್ಲಿ ಅಧಿಕ ಸಾಲ ಸೌಲಭ್ಯವನ್ನು ನೀಡುತ್ತಿರುವುದರಿಂದ ಇವತ್ತು ಸಹಕಾರಿ ಬ್ಯಾಂಕ್ ಗಳು ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಹಿಂದಿಕ್ಕಿ ಅಭಿವೃದ್ದಿ ಹೊಂದಿವೆ ಎಂದರು.

ಸರ್ವಧರ್ಮವನ್ನು ಒಳಗೊಂಡು ಸೇವೆ ನೀಡುವ ಮಾದರಿ ಸಂಸ್ಥೆಯಾಗಿರುವ ಗಣಪತಿ ಸಹಕಾರಿ ಬ್ಯಾಂಕ್ ಮತ್ತಷ್ಟು ಬೆಳೆದು ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ತಿ ಇಂದ್ರಾಳಿ, ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ತಿಂಗಳಾಯ, ಸಹಕಾರ ಸಂಘಗಳ ಉಪನಿಬಂಧಕ ಅರುಣ್ ಕುಮಾರ್, ದ.ಕ ಜಿಲ್ಲಾ ಕೇಂ. ಸ.ಬ್ಯಾಂಕ್ ನಿರ್ದೇಶಕ ರಾಜೇಶ್ ರಾವ್, ಬ್ಯಾಂಕಿನ ಉಪಾಧ್ಯಕ್ಷ ಬಿ.ಅಫ್ಜಲ್ ಸಾಹೆಬ್, ಸಿ.ಇ.ಒ ಮಹೇಶ್ ಸಾಲ್ಯಾನ್, ಶಾಖಾಧಿಕಾರಿ ನಿರ್ಮಲ ದಿನೇಶ್, ಬ್ಯಾಂಕಿನ ಆಡಳಿತ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಬ್ಯಾಂಕಿನ ಅಧ್ಯಕ್ಷ ಟಿ.ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.