ನೀಟ್ 2022: ನೋಂದಣಿ ದಿನಾಂಕ ಮೇ 15 ರವರೆಗೆ ವಿಸ್ತರಣೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ ನೋಂದಣಿ ಗಡುವನ್ನು ವಿಸ್ತರಿಸಿದೆ. 2022 ರ ನೀಟ್ ಅರ್ಜಿ ಪ್ರಕ್ರಿಯೆಯನ್ನು ಮೇ 15 ರವರೆಗೆ ವಿಸ್ತರಿಸಲಾಗಿದೆ. ಮೊದಲು ನೀಟ್ ಪದವಿಪೂರ್ವ-2022 ಪರೀಕ್ಷೆಗೆ ನೋಂದಾಯಿಸಲು ಕೊನೆಯ ದಿನಾಂಕ ಮೇ 6 ಆಗಿತ್ತು.

ವೈದ್ಯಕೀಯ ಆಕಾಂಕ್ಷಿಗಳು ಎನ್.ಟಿ.ಎ ನೀಟ್ ಯುಜಿ ಗಾಗಿ ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ನೋಂದಾಯಿಸಿಕೊಳ್ಳಬಹುದು. ಜುಲೈ 17 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಯು 200 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು 200 ನಿಮಿಷಗಳ ಅವಧಿಯವರೆಗೆ ನಡೆಯಲಿದೆ. ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಭಾರತದ ಸುಮಾರು 543 ನಗರಗಳಲ್ಲಿ ಮತ್ತು ಭಾರತದ ಹೊರಗಿನ 14 ನಗರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ.

ನೀಟ್ ನೋಂದಣಿ ಅರ್ಜಿ ಶುಲ್ಕವನ್ನು ಈ ವರ್ಷ ಹೆಚ್ಚಿಸಲಾಗಿದೆ. ಸಾಮಾನ್ಯ ವರ್ಗದ ನೋಂದಣಿ ಶುಲ್ಕ ಕಳೆದ ವರ್ಷ 1,500 ರೂಪಾಯಿ ಗಳಿದ್ದರೆ ಈ ಬಾರಿ 1,600 ರೂಪಾಯಿಗೆ ಹೆಚ್ಚಿಸಲಾಗಿದೆ. ಭಾರತದ ಹೊರಗಿನ ಅಭ್ಯರ್ಥಿಗಳಿಗೆ ಕಳೆದ ವರ್ಷ 7,500 ರೂಪಾಯಿ ಇದ್ದ ಅರ್ಜಿ ಶುಲ್ಕ ಇದೀಗ 8,500 ರೂ. ಆಗಿದೆ. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕಗಳು, ಇಡಬ್ಲ್ಯೂಎಸ್/ಒಬಿಸಿ- ಎನ್.ಸಿ.ಎಲ್- ರೂ 1,500, ಎಸ್.ಸಿ/ ಎಸ್.ಟಿ- ರೂ 800. ಆಗಿದೆ.