ಉಡುಪಿ: ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಅದರಲ್ಲಿ ತೊಡಗಿಕೊಳ್ಳಲು ವ್ಯಕ್ತಿ ಆರ್ಥಿಕವಾಗಿ ಸದೃಢನಾಗಬೇಕಿಲ್ಲ. ಆತನಿಗೆ ಪ್ರಾಮಾಣಿಕ ಸೇವಾ ಮನೋಭಾವ ಮತ್ತು ಆಸಕ್ತಿ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಕೂಡ ಸಾಮಾಜಿಕ ಕೆಲಸಗಳನ್ನು ಸಂಯೋಜಿಸಿಕೊಳ್ಳಬಹುದು. ಹಾಗೆ ಆ ಮೂಲಕ ಸಮಾಜಕ್ಕೆ ತಾನು ನೀಡಿದ ಕೊಡುಗೆಗಳಿಂದ ಆತ್ಮಸಂತೃಪ್ತಿ ಪಡೆದುಕೊಳ್ಳಬಹುದು ಎಂದು ಉಡುಪಿ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಅಭಿಪ್ರಾಯಪಟ್ಟರು.
ಉಡುಪಿ ಇಂದ್ರಾಳಿಯ ಕಾಮಾಕ್ಷಿ ದೇವಸ್ಥಾನದ ಸಭಾಂಗಣದಲ್ಲಿ ಮಣಿಪಾಲದ ಅಭಿಜ್ಞಾ ಎಜುಕೇಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಶ್ರಯದಲ್ಲಿ ಗುರುವಾರ ಆಯೋಜಿಸಿದ ಹತ್ತನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಚಿತ ಗಣಿತ ತರಬೇತಿ ತರಗತಿ ಸಕ್ಸಸ್ 33 ಗೆ ಚಾಲನೆ ನೀಡಿ ಮಾತನಾಡಿದರು.
ಮಣಿಪಾಲದ ಅಭಿಜ್ಞಾ ಎಜುಕೇಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಅಭಿಲಾಷ್ ಕೆ ಮಾತನಾಡಿ, ಅಗತ್ಯ ಉಳ್ಳ ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಮಣಿಪಾಲ ಎಂ.ಐ.ಟಿ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಕಾಮಾಕ್ಷಿ ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿ ರತ್ನಾಕರ್ ಇಂದ್ರಾಳಿ, ಮಂಗಳಾ ಚಂದ್ರಕಾಂತ್, ಸತೀಶ್ ಚಂದ್ರ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ದಿನೇಶ್, ಸಂಸ್ಥೆಯ ಸಲಹೆಗಾರ ಸೂರ್ಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಜಯಪ್ರದಾ ನಿರೂಪಿಸಿ ವಂದಿಸಿದರು.