ಒಂದು ವಾಹನದ ಮೇಲೆ ಬರೋಬ್ಬರಿ 100 ಸಂಚಾರ ಉಲ್ಲಂಘನೆ ಪ್ರಕರಣ, ಶೇ.50 ರಿಯಾಯಿತಿಯಲ್ಲಿ₹27,500 ಪಾವತಿಸಿದ ವಾಹನ ಸವಾರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ದಂಡಗಳನ್ನು ಪಾವತಿಸಲು ರಾಜ್ಯ ಸರ್ಕಾರ ನೀಡಿರುವ ಶೇ.50ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ನಾಗರಿಕರೊಬ್ಬರು ತಮ್ಮ ವಾಹನದ ಮೇಲೆ ದಾಖಲಾಗಿದ್ದ 100 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ.50ರಷ್ಟು ರಿಯಾಯಿತಿ ಸೌಲಭ್ಯ ಪಡೆದು ಒಟ್ಟು ₹27,500 ದಂಡವನ್ನು ಪಾವತಿಸಿದ್ದಾರೆ. ಈ ಮೂಲಕ ಸರ್ಕಾರದ ವಿಶೇಷ ರಿಯಾಯಿತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ದಂಡಗಳ ಮೇಲೆ ಜೂನ್ 21ರಿಂದ ಜುಲೈ 10ರವರೆಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಈ ಅವಧಿಯೊಳಗೆ ಬಾಕಿ ದಂಡಗಳನ್ನು ಪಾವತಿಸುವಂತೆ ಸಂಚಾರ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ದಂಡ ಪಾವತಿಸಿದ ವಾಹನ ಸವಾರರು, ಇನ್ನು ಮುಂದೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಹಾಗೂ ಸುರಕ್ಷಿತ ವಾಹನ ಚಾಲನೆಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಸಂಚಾರ ನಿಯಮಗಳ ಪಾಲನೆಯು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ನಿರ್ಮಿಸಲು ನೆರವಾಗುತ್ತದೆ. ಆದ್ದರಿಂದ ವಾಹನ ಸವಾರರು ಈ ವಿಶೇಷ ರಿಯಾಯಿತಿ ಅವಧಿಯನ್ನು ಸದುಪಯೋಗಪಡಿಸಿಕೊಂಡು ಬಾಕಿ ಇರುವ ದಂಡಗಳನ್ನು ಪಾವತಿಸಬೇಕು ಎಂದು ಸಲಹೆ ನೀಡಿದ್ದಾರೆ.