ವೀಡಿಯೋ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಉಡುಪಿಗೆ

ಉಡುಪಿ: ಉಡುಪಿ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಕೂಲಕಂಷ ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಬುಧವಾರದಂದು ಉಡುಪಿಗೆ ಆಗಮಿಸಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಗಳ ಸಮಸ್ಯೆ ಕುರಿತು ವಿಚಾರಣೆಗೆ ಬಂದಿದ್ದೇನೆ. ನಾನು ಮೊದಲು ಈ ಸಂಬಂಧ ಪೊಲೀಸರನ್ನು ಭೇಟಿಯಾಗಿ ಎಫ್‌ಐಆರ್ ಸೇರಿದಂತೆ ಎಲ್ಲ ವಿಚಾರಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಗುರುವಾರದಂದು ಕಾಲೇಜಿಗೆ ಭೇಟಿ ನೀಡಿ ಸಂತ್ರಸ್ತೆ, ಮೂವರು ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತನಾಡಿ ವಿಷಯದ ಪೂರ್ಣ ಪ್ರಮಾಣದ ವಸ್ತುಸ್ಥಿತಿ ಅರಿತ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ. ಖುಷ್ಬೂ ಎರಡು ದಿನ ಉಡುಪಿಯಲ್ಲಿರಲಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು.