ಅಂತರಾಷ್ಟ್ರೀಯ ಡ್ರಗ್ಸ್ ಜಾಲದ ಕಿಂಗ್ ಪಿನ್ ತಮಿಳು ಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ಬಂಧನ: ಎನ್‌ಸಿಬಿ ಕಾರ್ಯಾಚರಣೆ

ಚೆನ್ನೈ: 2,000 ಕೋಟಿ ರೂಪಾಯಿಗಳ ಮಾದಕವಸ್ತು ಕಳ್ಳಸಾಗಣೆ ದಂಧೆಯಲ್ಲಿ ಮಾಜಿ ಡಿಎಂಕೆ ನಾಯಕ ಮತ್ತು ತಮಿಳು ಚಲನಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ನನ್ನು ಎನ್‌ಸಿಬಿ ಬಂಧಿಸಿದೆ.

ಕಳೆದ ತಿಂಗಳು 2,000 ಕೋಟಿ ರೂ. ಮಾದಕ ವಸ್ತು ಕಳ್ಳಸಾಗಣೆ ದಂಧೆಗೆ ಸಂಬಂಧಿಸಿದಂತೆ ದ್ರಾವಿಡ ಮುನ್ನೇತ್ರ ಕಳಗಂ (DMK) ಮಾಜಿ ಪದಾಧಿಕಾರಿ ಮತ್ತು ತಮಿಳು ಚಲನಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ನನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

NCB ಉಪ ಮಹಾನಿರ್ದೇಶಕ (ಕಾರ್ಯಾಚರಣೆ) ಜ್ಞಾನೇಶ್ವರ್ ಸಿಂಗ್ ಸಾದಿಕ್ ಬಂಧನವನ್ನು ದೃಢಪಡಿಸಿದ್ದಾರೆ.

“ಜಾಫರ್ ಸಾದಿಕ್ ಭಾರತ-ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮಾದಕವಸ್ತು ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಆಗಿದ್ದು, ನಾವು ತನಿಖೆ ನಡೆಸುತ್ತಿದ್ದೇವೆ. ನಾವು ಮಧ್ಯಾಹ್ನದ ನಂತರ ವಿವರಗಳನ್ನು ಹಂಚಿಕೊಳ್ಳುತ್ತೇವೆ ”ಎಂದು ಸಿಂಗ್ ಶನಿವಾರ ಹೇಳಿದ್ದಾರೆ.

ಸಾದಿಕ್ ಪ್ರಮುಖ ಚಲನಚಿತ್ರ ನಿರ್ಮಾಪಕನಾಗಿದ್ದು, ಕನಿಷ್ಠ ನಾಲ್ಕು ಚಲನಚಿತ್ರಗಳನ್ನು ನಿರ್ಮಿಸಿದ್ದಾನೆ ಅಥವಾ ಸಹ-ನಿರ್ಮಾಣ ಮಾಡಿದ್ದಾನೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಐದನೇ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಡ್ರಗ್ಸ್ ಜಾಲದ ಹಣ ಬಳಕೆಯಾಗಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ಕಳೆದ ಎರಡು ವಾರಗಳಿಂದ, ತಮಿಳುನಾಡಿನಲ್ಲಿ ವಿರೋಧ ಪಕ್ಷಗಳು ಡ್ರಗ್ಸ್ ದಂಧೆಯಲ್ಲಿ ಜಾಫರ್ ಭಾಗಿಯಾಗಿರುವ ಆರೋಪದ ವಿರುದ್ಧ ಪ್ರತಿಭಟನೆಗಳನ್ನು ಆರಂಭಿಸಿವೆ.