ನಾಝಿಯಾ. ನಾಲ್ಕು ಮಕ್ಕಳ ತಾಯಿ. ಎರಡು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿರುವ ಇವರದು ಟೈಲರಿಂಗ್ ವೃತ್ತಿ. ಮೊದಲ ಮಗನದು ಫೋಟೋಗ್ರಫಿ ಉದ್ಯೋಗ. ಉಳಿದವರು ಬಿ.ಕಾಂ, ನರ್ಸಿಂಗ್ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳು.
41 ವರ್ಷದ ನಾಝಿಯಾ ಅವರಿಗೆ ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲು. ಅದರ ನಡುವೆಯೂ ಅವರ ಸಾಧನೆಯ ಕನಸು ಯಾರನ್ನೂ ಬೆರಗುಗೊಳಿಸುವಂತದ್ದು. ಯೋಗಾಸನ ಸ್ಪರ್ಧೆಗಳಲ್ಲಿ ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅವರೀಗ 2019ರ ಮೇ ತಿಂಗಳಲ್ಲಿ ಥಾಯ್ಲೆಂಡಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅವಕಾಶವೇ ನನಗೆ ದೇವರು:
“ಕಳೆದ ಸಲವೂ ಆಯ್ಕೆಯಾಗಿದ್ದೆ. ಹಣ ಹೊಂದಿಸೋಕೆ ಆಗಿರಲಿಲ್ಲ. ಸಾಲ ತೆಗೆಯೋಣವೆಂದರೆ ಮಕ್ಕಳ ಶಿಕ್ಷಣಕ್ಕಾಗಿ ಈಗಲೇ ಹಣ ಪಡೆದಿದ್ದೇನೆ. ಈಸಲ ಸಿಕ್ಕ ಅವಕಾಶ ಕಳೆದುಕೊಳ್ಳೋಕೆ ಮನಸ್ಸಿಲ್ಲ. ಒಟ್ಟು ₹80,000 ಕಟ್ಟಬೇಕು. ಅರ್ಧ ಹಣ ಡಿಸೆಂಬರ್ 31 ರೊಳಗೆ, ಮತ್ತರ್ಧ ಜನವರಿ. ಯಾರಾದರೂ ಪ್ರೋತ್ಸಾಹ ನೀಡುವವರಿದ್ದರೆ ನನಗದು ದೊಡ್ಡ ಉಪಕಾರ” ಎನ್ನುತ್ತಾರೆ ನಾಝಿಯಾ.
ಕಾರ್ಕಳದ ನರೇಂದ್ರ ಕಾಮತ್ ಹಾಗೂ ಅಶೋಕ್ ಕುಮಾರ್ ಇವರ ಗುರುಗಳು. ನಿಟ್ಟೆ ರೋಟರಿ ಭವನದಲ್ಲಿ 10 ದಿನಗಳ ತರಬೇತಿಗೆ ಸೇರಿದ್ದ ನಾಝಿಯಾರಿಗೆ ಆ ಹತ್ತೇ ದಿನದಲ್ಲಿ ವರ್ಷದಿಂದ ಕಾಡುತ್ತಿದ್ದ ತಲೆಶೂಲೆಯ ಸಮಸ್ಯೆ ಮಾಯವಾಯ್ತಂತೆ. ಅದರಿಂದ ಚಕಿತಗೊಂಡ ಆಕೆ ನಿರಂತರ ಅಭ್ಯಾಸದಲ್ಲಿ ತೊಡಗಿದರು. ಕಾರ್ಕಳಕ್ಕೆ ಹೋಗಿ ಮತ್ತಷ್ಟೂ ಕಲಿತರು. ಆಸಕ್ತಿ ಸ್ಪರ್ಧೆಗಳ ಕಡೆ ತಿರುಗಿತು. ಪ್ರಶಸ್ತಿಗಳಿಸಿದರು. ಕಲಿತದ್ದನ್ನು ಕಲಿಸಲು ಶುರು ಮಾಡಿದರು. ಪ್ರತೀದಿನ ಬೆಳಿಗ್ಗೆ ಆರರಿಂದ ಏಳು ಗಂಟೆಯವರೆಗೆ ನಿಟ್ಟೆಯ ರೋಟರಿ ಭವನದಲ್ಲಿ ತರಬೇತಿ ನೀಡುತ್ತಿದ್ದಾರೆ.
ಈ ಹೆಣ್ಣುಮಗಳ ಕನಸಿಗೆ ಜೊತೆಯಾಗೋಣ:
“ಯೋಗ” ಭಾರತ ದೇಶದ ಐಡೆಂಟಿಟಿ. ಅದಕ್ಕೆ ಹಿಂದೂ ಮುಸ್ಲಿಂ ಕ್ರೈಸ್ತರೆಂಬ ಬೇಧವಿಲ್ಲ. ಇಡೀ ವಿಶ್ವವೇ ಅದಕ್ಕೀಗ ಮನ್ನಣೆ ನೀಡಿದೆ. ಎಸ್.ಜಿ.ಎಸ್ ಇಂಟರ್ನ್ಯಾಷನಲ್ ಯೋಗ ಫೌಂಡೇಷನ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರವು ಥಾಯ್ಲೆಂಡಿನಲ್ಲಿ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸನ್ನು ಕಾರ್ಕಳ ತಾಲೂಕಿನ ನಿಟ್ಟೆ ಅಂಬಡೆಕಲ್ಲಿನ ನಿವಾಸಿ ನಾಝಿಯಾ ಕಾಣುತ್ತಿದ್ದಾರೆ. ಅವರ ನನಸಿಗೆ ನಮ್ಮೆಲ್ಲರ ಪ್ರೋತ್ಸಾಹದ ಅಗತ್ಯವಿದೆ.
ನಿಮ್ಮ ಅಕ್ಕರೆ ದೊರೆತರೆ ,ನಝಿಯಾಳ ಬದುಕು ಸಕ್ಕರೆ:
ಹನಿ ಹನಿ ಕೂಡಿದರೆ ಹಳ್ಳ. ಸಾಧ್ಯವಿರುವಷ್ಟು ಸಹಾಯ ಅವರಿಗೆ ನೀಡಿದರೆ ಅವರ ಸಾಧನೆಯ ಕನಸಿಗೆ ರೆಕ್ಕೆಗಳು ಹುಟ್ಟಿಕೊಳ್ಳುತ್ತವೆ. ನಾಲ್ಕು ಮಕ್ಕಳ ತಾಯಿಯ ಈ ಜೀವನ ಪ್ರೀತಿ ಎಲ್ಲರಿಗೂ ಮಾದರಿಯಾಗುತ್ತದೆ.
ಅವರ ಅಕೌಂಟ್ ನಂಬರ್
Nazia
Vijaya Bank
IFSC : VIJB0001166
Account No. 116601010004852
Mobile No. +919035587346
***