ನೆಲ್ಲಿಕಾರಿನ ಈ ಪಂಡಿತರ ಮನೆ ನೀವು ನೋಡಲೇಬೇಕು: ಓಲ್ಡ್ ಮನೆ, ಆದ್ರೂ ಸಖತ್ ಬೋಲ್ಡ್, ಗತ ನೆನಪುಗಳೇ ಇಲ್ಲಿ ಗೋಲ್ಡ್

ಕೆಲವರಿಗೆ ಹಳೆಯ ಮನೆ, ಹಳೆಯ ವಸ್ತು ಹಾಗೂ ಹಳೆಯ ದಿನಗಳ ವೈಭವಗಳನ್ನು ಮೆಲುಕು ಹಾಕುವ ಖಯಾಲಿ ಜಾಸ್ತಿ. ಓಲ್ಡ್ ಈಸ್ ಗೋಲ್ಡ್ ಎಂದರೆ ಕೆಲವರು ಬೋಲ್ಡ್ ಆಗುತ್ತಾರೆ. ನಿಜಕ್ಕೂ ಓಲ್ಡ್ ಈಸ್ ಗೋಲ್ಡ್ ಎನ್ನುವ ಮಾತಿನ ಅರ್ಥ ಗೊತ್ತಾಗಬೇಕಿದ್ದರೆ ನೀವು ನೆಲ್ಲಿಕಾರಿನ ಪಂಡಿತ ಮನೆಗೊಮ್ಮೆ ಬರಬೇಕು.ಇಲ್ಲಿನ ಹಳೆ ವೈಭವಗಳಲ್ಲಿ ಒಂದಷ್ಟು ಹೊತ್ತು ಕಳೆದುಹೋಗಬೇಕು. ಬನ್ನಿ ಹಾಗಾದ್ರೆ ನಮ್ಮದೇ ಆಸುಪಾಸಿನಲ್ಲಿರುವ ಈ ಪಂಡಿತರ ಮನೆಯ ಸ್ಪೆಷಾಲಿಟಿ ಏನು?ಅಂತೆಲ್ಲಾ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಜಸ್ಟ್ ಓದಿ.

ಪಂಡಿತರ ಮನೇಲಿ ಒಂದು ರೌಂಡು;

 ಕಾರ್ಕಳ-ಬೆಳ್ತಂಗಡಿ ದಾರಿಯಲ್ಲಿ ಸಿಗುವ  ನೆಲ್ಲಿಕಾರು ಅನ್ನುವ ಪುಟ್ಟ ಗ್ರಾಮದ ಅತಿಶಯ ಜೈನ ಬಸದಿಯ ಆವರಣದಲ್ಲಿರುವ ಪಂಡಿತರ ಮನೆಯ ಅಂದ ಥಟ್ ಅಂತ ಸೆಳೆದುಬಿಡುವಷ್ಟು ಸೂಪರ್. ಸುಮಾರು 6೦೦ ವರ್ಷಗಳ ಇತಿಹಾಸವಿರುವ ಈ ಮನೆ ಜೈನ ಮನೆತನದ ಪರಂಪರೆಗೆ ಸಾಕ್ಷಿ. ಈ ಮನೆತನದವರು ಹಿಂದೆ ಗಿಡಮೂಲಿಕೆಗಳಿಂದ ತರಹೇವಾರಿ ಮದ್ದುಗಳನ್ನು ತಯಾರಿಸಿ ಉಚಿತವಾಗಿ ರೋಗಿಗಳಿಗೆ ನೀಡುತ್ತಿದ್ದುದರಿಂದಲೇ ಮದ್ದು ಕೊಡುವ ಪಂಡಿತರ ಮನೆ ಎನ್ನುವ ನಾಮಾಂಕಿತ ಗಿಟ್ಟಿಸಿಕೊಂಡಿತು.

ಈ ಅಂದದ ಮನೇಲಿ ಹಳೆ ಸಾಂಪ್ರದಾಯಿಕ ಭಂಗಿಯ ಗೋಡೆಚಿತ್ರಗಳು,ಭಿತ್ತಿ ಶಿಲ್ಪಗಳು   ರಾರಾಜಿಸುತ್ತಿವೆ. ಇದೀಗ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಯನ್ ಜೈನ್ ನೆಲ್ಲಿಕಾರು ಅವರು ಈ ಮನೆಗೆ ಹಳೆ ಶೈಲಿಯಲ್ಲೇ ಹೊಸ ಸ್ಪರ್ಶ ನೀಡಿದ್ದಾರೆ.

ಚಂದಕ್ಕಿಂತ ಚೆಂದ:

ಸುತ್ತಲಿನ ಗೋಡೆಯ ಮೇಲೆ ರಾಜಾಜಿಸುವ ಹಚ್ಚೆ ಚಿತ್ರಗಳು, ನುಣುಪುಗಂಬಗಳು, ಕಥೆ ಹೇಳುವ ಕೆಲ ಹಚ್ಚೆ ಚಿತ್ರಗಳು, ಆ ಕಾಲದ ಮದುವೆ ಸಂಭ್ರಮವನ್ನು ವರ್ಣಿಸೋ ಹಸೆಮಣೆ ಪೈಂಟಿಂಗ್, ಹುಲಿ, ಹಾಗೂ ದನ ಒಂದೇ ಕೆರೆಯಲ್ಲಿ ನೀರು ಕುಡಿಯುತ್ತಿರುವುದನ್ನು ಮನುಷ್ಯರ ಸ್ವಾಮರಸ್ಯಕ್ಕೆ ಹೋಲಿಕೆಯಾಗಿ ಮಾಳಿಗೆಯ ತುಂಬಾ ಬಿಡಿಸಿಟ್ಟ ಚಿತ್ರಗಳು ಕಲಾಕಾರನ ತೀಕ್ಣ ಕಲ್ಪನಾಶಕ್ತಿ, ಪ್ರೌಡಿಮೆಯನ್ನು ಸಾರುತ್ತವೆ.  ಹಿಂದೆ ಬ್ರಿಟೀಷರ ಕಾಲದಲ್ಲಿ ಖೈದಿಗಳನ್ನು ಈ ಮನೆಯ ಒಂದು ಕೋಣೆಯಲ್ಲಿ ಬಂದಿಸಿಟ್ಟು ಹೋಗುತ್ತಿದ್ದರಂತೆ ಕೊನೆಗೆ ಆ ಖೈದಿಗಳನ್ನು ಶಿವಮೊಗ್ಗ ಜೈಲಿಗೆ ಕೊಂಡೊಯ್ಯುತ್ತಿದ್ದರಂತೆ. ಆ ಕೋಣೆಯ ಹೆಸರೇ ಸರಳ್ ಚಾವಡಿ. ಈ ಚಾವಡಿ ಸರಳವಾಗಿದ್ದರೂ ನೋಡಲು ಥೇಟ್ ಜೈಲಿನಂತೆಯೇ ಇದೆ ಎನ್ನುವುದು ವಿಶೇಷ.

ಇಲ್ಲಿದೆ ಒಂದು ಮ್ಯೂಸಿಯಂ:

ಹಳೆಯ ರೇಡಿಯೋ, ಹಳೆಯ ಟಿ.ವಿ.ಹಳೆಯ ಕುರ್ಚಿ,ಅನ್ನ ಬಸಿಯುವ ಮರಿಗೆ, ಸ್ನಾನಕ್ಕೆ ಬಳಸುವ ಮರದ ಪಾತ್ರೆ, ಕಡಿಯುವ ಕಲ್ಲು,ಮೃದಂಗ, ಹಾರ್ಮೋನಿಯಂ, ನೀರಿನ ರಾಟೆ ಸೇರಿದಂತೆ ಐನೂರಕ್ಕೂ ಹೆಚ್ಚಿನ ಹಳೆಯ ವೈಭವ ಸಾರುವ ಪರಿಕರಗಳು ಗಮನ ಸೆಳೆಯುವಂತಿದೆ.ಒಟ್ಟಾರೆ ಮನೆಯ ಮಾಳಿಗೆಯಲ್ಲಿರುವ ಈ ಮ್ಯೂಸಿಯಂ ಗೆ ಬಂದರೆ ಏನುಂಟು?ಏನಿಲ್ಲ ಅಂತ ಕೇಳುವ ಪರಿಸ್ಥಿತಿ.ಈ ಮ್ಯೂಸಿಯಂ ಅನ್ನು ಸಂರಕ್ಷಿಸಿಟ್ಟಿರುವ ಶೈಲಿಯೇ ಮನಸ್ಸಿಗೆ ಮುದ ನೀಡುವಂತಿದೆ.

ನಯನ್ ಜೈನ್ ಅನ್ನುವ ಕಲಾಪ್ರೇಮಿ:

ಪರಂಪರೆಯಾಗಿ ಬಂದ ಮನೆಯನ್ನು, ಕಣ್ಣಲ್ಲಿ ಕಣ್ಣಿಟ್ಟು ಸಂರಕ್ಷಿಸುತ್ತಿರುವ ನಯನ್ ಕುಮಾರ್ ಜೈನ್, ಅವರು ಸುಮಾರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಉಳಿಯಬೇಕು ಅನ್ನುವ ಕಾಳಜಿಯಿಂದ ಅಲ್ಲಲ್ಲಿ ಕೆಲ ಕಡೆ ರೂಪ ಕಳೆದುಕೊಳ್ಳುತ್ತಿರುವ ಮನೆಗೆ ಹೊಸ ರೂಪ ಕೊಟ್ಟರು. ಕೈಯಲ್ಲಷ್ಟು ದುಡ್ಡಿರದಿದ್ದರೂ ಕುಟುಂಬದವರ ಸಹಕಾರದಿಂದ ಮನೆಗೆ ಹೊಸ ಭಾಷ್ಯ ಒದಗಿಸಿದರು. ನುರಿತ ಕಲಾವಿದಿಂದ ಇಡೀ ಮನೆಗೊಂದು ರಂಗು ಕೊಟ್ಟರು. ಈಗಲೂ  ಹಳೆಯ ವಸ್ತುಗಳನ್ನು ಕೊಳ್ಳಲು ಹಳೆಯ ಮನೆಗಳನ್ನು ನೋಡಲು ಊರುರು ಸುತ್ತುವ ಇವರಿಗೆ ಹಳೆ ವಸ್ತುಗಳು, ಹಳೆ ಮನೆಗಳೆಂದರೆ ವಿಪರೀತ ಕ್ರೇಜ್.

ದೊಡ್ಡ ದೊಡ್ಡ ಉದ್ಯಮಿಗಳ ನಂಟು ಹೊಂದಿರುವ ನಯನ್ ಜೈನ್ ಅವರು ಯಾವುದೇ ಪ್ರಭಾವಕ್ಕೊಳಗಾಗದೇ ಸರಳವಾಗಿ ಈ ಮನೆಯನ್ನು ಕಾಪಾಡಿಕೊಂಡು ಬದುಕುತ್ತಿದ್ದಾರೆ.

ಹೊಸ ಉದ್ಯಮಿಗಳಿಗೆ ಮಾರ್ಗದರ್ಶಕ

ಬಿಸಿನೆಸ್ ಜಗತ್ತಿನ ಬಗ್ಗೆ ತಮ್ಮದೇ ಆದ ಐಡಿಯಾ ಹೊಂದಿರುವ ನಯನ್ ಕುಮಾರ್ ಜೈನ್ ಅವರು , ಯುವ ಉದ್ಯಮಿಗಳಿಗೆ ತಮ್ಮ ಅಮೂಲ್ಯ ಸಲಹೆ ನೀಡುತ್ತಿದ್ದಾರೆ.ಹೊಸ ಉದ್ಯಮ ಆರಂಭಿಸುವವರು ಯಾರು ಬಂದರೂ ಸಾಕು ಇವರು ತಮಗೆ ಗೊತ್ತಿದ್ದ ಐಡಿಯಾ ಹಾಗೂ ಬಿಸಿನೆಸ್ ಟ್ರಿಕ್ ಗಳನ್ನು ನೀಡುತ್ತಾರೆ.

‘ನನ್ನ ಬಳಿ ಹೊಸ ಹಳೆ ಮನೆಗಳನ್ನೇ ಸಂರಕ್ಷಿಸಿಕೊಂಡು ಮಾಡಬಹುದಾದ ಅನೇಕ ವ್ಯಾವಹರಿಕ ಐಡಿಯಾಗಳಿವೆ.ಹಾಗಂತ ಹಳೆ ಮನೆಯನ್ನು ಬರೀ ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಲ್ಲ.ಇಲ್ಲಿ ದೊಡ್ಡ ಮಟ್ಟದಲ್ಲಿ ವಸ್ತು ಸಂಗ್ರಹಾಲಯ ಮಾಡುವ ಉದ್ದೇಶ ನನಗಿದೆ. ಆದರೆ ಆರ್ಥಿಕ ತೊಂದರೆಯಿಂದ ಏನೂ ಮಾಡದೇ ಸುಮ್ಮನಾಗಿದ್ದೇನಷ್ಟೇ ಎನ್ನುತ್ತಾರೆ ನಯನ್ ಕುಮಾರ್ ಜೈನ್.  ಹಳೆ ಮನೆಯ ಕುರಿತು ಆಸಕ್ತಿ ಇರುವವರು, ಸುಮ್ಮನೆ ವಿಕೆಂಡ್ ನಲ್ಲಿ ಎಲ್ಲಿ ಸುತ್ತಬೇಕು ಎಂದು ಪ್ರಶ್ನೆ ಕೇಳುವವರು ಪಂಡಿತರ ಮನೆಯ ಸೊಗಸು ನೋಡಲು ಒಮ್ಮೆ ನೆಲ್ಲಿಕಾರಿಗೆ ಬನ್ನಿ,  ನಯನ್ ಕುಮಾರ್ ಜೈನ್ ಅವರ ಸಂಪರ್ಕ:9481184705,

– ಶೆಣೈ