ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಸಂಕಲ್ಪವಾಗಬೇಕು ಎಂಬ ಉದ್ದೇಶದಿಂದ ಸಸಿ ವಿತರಣೆ ಮಾಡ್ತೇವೆ ಸಸಿ ನೆಟ್ಟು ಪೋಷಿಸೋಣ ಬನ್ನಿ, ಎಂದು ಕರೆದರೆ ನಮ್ಮಲ್ಲಿ ಮೂಗು ಮುರಿಯುವವರೇ ಹೆಚ್ಚು , ಆದರೆ ನಮ್ಮೂರಲ್ಲಿ ಮನೆಗಳಲ್ಲಿ ನಡೆಯುವ ಸಂಭ್ರಮಗಳ ನಡುವೆಯೇ ಇಂಥಹ ಸಂಕಲ್ಪಗಳಿಗೂ ಅವಕಾಶ ನೀಡಿದರೆ ಅದು ಹೆಚ್ಚು ಪರಿಣಾಮಕಾರಿಯೂ ಆಗುತ್ತದೆ. ಸಂಭ್ರಮದ ನಡುವೆಯೇ ಸಂಕಲ್ಪವನ್ನು ತೊಡುವ ಒಂದು ವಿಶಿಷ್ಟ ಕಾರ್ಯಕ್ರಮ ಬುಧವಾರ ಮಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ಪ್ರಸಿದ್ಧ ಆಗಮ ವಿದ್ವಾಂಸ ಜ್ಯೋತಿಷಿ ಮಟ್ಟು ಪ್ರವೀಣ ಹಾಗೂ ಹರಿಣಿ ತಂತ್ರಿಗಳು ತಮ್ಮ ಪುಟ್ಟ ಗಂಡು ಮಗು(ಶ್ರೀಹರಿ)ವಿನ ನಾಮಕರಣೋತ್ಸವದ ಸಂಭ್ರಮದ ನಡುವೆಯೇ ಆಗಮಿಸಿದ ಬಂಧು ಮಹನೀಯರಿಗೆ ಪ್ರಕೃತಿ ರಕ್ಷಣೆಗೆ ಮುಂದಾಗುವ ಸಂಕಲ್ಪ ತೊಡುವ ಪ್ರೇರಣೆ ನೀಡುವ ಉತ್ತಮ ಕಾರ್ಯಕ್ರಮ ನಡೆಸಿದರು.
ಬಗೆಬಗೆ ಗಿಡ ಕೊಟ್ಟರು:
ಆಗಮಿಸಿದ ನೂರಾರು ಮಂದಿಗೆ ಸಾವಿರಾರು ರೂ ವೆಚ್ಚ ಮಾಡಿ ಉತ್ತಮ ತಳಿಯ ಹೂ , ಹಣ್ಣು ಹಾಗೂ ಔಷಧೀಯ ಸಸ್ಯಗಳನ್ನು ವಿತರಿಸಿ ನೆಟ್ಟು ಪೋಷಿಸುವಂತೆ ವಿನಂತಿಸಿದರು. ಉತ್ತಮ ತಳಿಯ ಗುಲಾಬಿ , ಕಿಸ್ಕಾರ ,ಕದಂಬ ಸಂಪಿಗೆ , ಹಣ್ಣು ಸಂಪಿಗೆ ,ಮಾವು ಹಲಸು ಪೇರಳೆ ,ನೇರಳೆ , ಪುನರ್ಪುಳಿ , ಸಿಹಿ ಅಂಬಡೆ , ಅಂಬಡೆ , ಚಿಕ್ಕು , ಜಂಬು ನೇರಳೆ , ತೆಂಗು , ಅಡಿಕೆ ಸೀತಾಫಲ , ರಾಂಫಲ , ನಕ್ಷತ್ರ ಹಾಗೂ ರಾಶಿ ಸಂಬಂಧಿ ಸಸಿಗಳು , ನಾಗಕೇಸರ , ಬಿದಿರು ,ಫಾದರಿ ,ಖದಿರ , ಅರ್ಜುನ , ಕಹಿಬೇವು , ಮಾದಿಫಲ ಮೊದಲಾದ ಹತ್ತಾರು ಬಗೆಯ 600 ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಯಿತು, ಕಾರ್ಯಕ್ರಮ ಕ್ಕೆ ಬಂದವರೂ ಸಂತೋಷದಿಂದಲೇ ಸಸಿಗಳನ್ನು ಕೊಂಡೊಯ್ದರು.
ದೇವಸ್ಥಾನದ ಆವರಣದಲ್ಲೂ ಅಶ್ವತ್ಥ , ನೆಲ್ಲಿ , ಶಮೀ ಹಾಗೂ ತೆಂಗಿನ ಸಸಿಗಳನ್ನು ಪ್ರವೀಣ ತಂತ್ರಿಗಳು ನೆಟ್ಟರು. ಈ ಸಂದರ್ಭದಲ್ಲಿ ನಡೆದ ಚಿಕ್ಕ ಸಭಾಕಾರ್ಯಕ್ರಮದಲ್ಲಿ ವಾಸ್ತು ತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಸಸಿಗಳನ್ನು ನೆಟ್ಟು ಪೋಷಿಸುವ ಅನಿವಾರ್ಯತೆಯ ಬಗ್ಗೆ ಮಾತನಾಡಿದರು. ಪ್ರವೀಣ ತಂತ್ರಿ ಸ್ವಾಗತಿಸಿ , ದೇವಳದ ಆಡಳಿತ ಮೊಕ್ತೇಸರ ಮಟ್ಟು ಲಕ್ಷ್ಮೀನಾರಾಯಣ ರಾವ್ ವಂದಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ರಾಘವೇಂದ್ರಭಟ್ಪ, ಜನಾರ್ದನ ಕೊಡವೂರು , ಅಹಲ್ಯಾ ತಂತ್ರಿ , ಜ್ಯೋತಿಷಿಗಳಾದ ಗೋಪಾಲ ಜೋಯಿಸ್ ,ಹೆರ್ಗ ರವೀಂದ್ರ ಭಟ್ ,ದೇವಳದ ಅರ್ಚಕ ಶ್ರೀಕಾಂತ್ ಭಟ್ , ಶ್ರೀಶ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಮಗುವಿನ ನಾಮಕರಣೋತ್ಸವವನ್ನು ಸಸ್ಯೋತ್ಸವವನ್ನಾಗಿ ಸ್ಮರಣೀಯವಾಗಿಸಿದ ಸಂತೋಷದಲ್ಲಿ ಪ್ರವೀಣ ತಂತ್ರಿ ಹರಿಣಿ ದಂಪತಿ ಸಂಭ್ರಮಿಸಿದರು.
ಉಡುಪಿ ಎಕ್ಸ್ ಪ್ರೆಸ್ ಕಾಳಜಿ: ನಮ್ಮ ಪರಿಸರವನ್ನು ಬೆಳೆಸಬೇಕಾಗಿದ್ದು ನಾವು ಮಾಡಲೇಬೇಕಾದ ಕೆಲಸ. ಆ ಕೆಲಸವನ್ನು ನಾವು ನಮ್ಮ ಸ್ನೇಹಿತರಿಗೆಲ್ಲಾ ಸಸಿ ವಿತರಿಸುವ ಮೂಲಕ ಮಾಡಬಹುದು. ಸಸಿ ಪಡೆದವರು ಆ ಸಸಿ ನೆಟ್ಟು ಪೋಷಿಸಿದರೆ ಸಾಕು, ಆ ಒಂದೇ ಒಂದು ಮರದಿಂದ ಭೂಮಿಗೆ, ನಮ್ಮ ಜೀವಕ್ಕೆ ಬೇಕಾದದ್ದೆಲ್ಲಾ ಸಿಗುತ್ತದೆ. ನೀವೂ ಸಸಿ ಕೊಟ್ಟು ಪರಿಸರ ಬೆಳೆಸಲು ಪ್ರೋತ್ಸಾಹಿಸಿ. ಈ ದಂಪತಿಗಳು ನಿಮಗೂ ಮಾದರಿಯಾಗಲಿ