ಕರಾವಳಿಯ ಭಾಗದಲ್ಲಿ ಬಿಸಿಲು ಧಗಧಗಿಸುತ್ತಿದ್ದು, ಮಂಗಳೂರಿನಲ್ಲಿ 39ಡಿಗ್ರಿ ಸೆಲ್ಸಿಯಸ್ ನ ಅತ್ಯಾಧಿಕ ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪಾಘಾತದಿಂದ ಜನರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳು ಕೂಡಾ ಪ್ರಾಣಕಳೆದುಕೊಳ್ಳುವ ಘಟನೆಗಳು ಭಾರತದಲ್ಲಿ ಸರ್ವೇ ಸಾಮಾನ್ಯ. ಬೇಸಿಗೆ ಕಾಲದಲ್ಲಿ ದೇಹವು ಅತಿ ಹೆಚ್ಚು ನೀರನ್ನು ಕಳೆದುಕೊಳ್ಳುವುದರಿಂದ ಈ ಸಮಯದಲ್ಲಿ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯ. ಬರಿಯ ನೀರು ಕುಡಿಯುವ ಬದಲಿಗೆ ಕೆಲವೊಂದು ಆರೋಗ್ಯ ಪೇಯಗಳನ್ನು ಆಹಾರದ ಜೊತೆ ಸೇವಿಸಿದಲ್ಲಿ ತನುವನ್ನು ತಂಪಾಗಿಸುವ ಜೊತೆ ಮನಸ್ಸನ್ನೂ ಉಲ್ಲಾಸಭರಿತವಾಗಿಸಿಕೊಳ್ಳಬಹುದು.
ನೀರು ಮಜ್ಜಿಗೆ: ಮಜ್ಜಿಗೆಯ ನಿಯಮಿತ ಸೇವನೆಯು ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಮತ್ತು ಹೀಗಾಗಿ ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳ ರೋಗಿಗಳಿಗೆ ಸಹಾಯ ಮಾಡುತ್ತದೆ. ಮಜ್ಜಿಗೆಯಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ಪ್ರತಿದಿನ ಮಜ್ಜಿಗೆಯನ್ನು ಕುಡಿಯುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ವಿವಿಧ ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ತಾಜಾ ಮಜ್ಜಿಗೆಯ ನಿಯಮಿತ ಸೇವನೆಯು ಮೂತ್ರಪಿಂಡದ ಸಮಸ್ಯೆಗಳಿಗೂ ಪರಿಹಾರ ಒದಗಿಸಬಲ್ಲದು. ಮಾತ್ರವಲ್ಲ, ದೇಹ ತೂಕವನ್ನು ನಿಯಂತ್ರಣದಲ್ಲಿಡಲೂ ಮಜ್ಜಿಗೆ ಸಹಕಾರಿ. ಹಾಲು ಮತ್ತು ಹಾಲಿನ ಉಪಉತ್ಪನ್ನಗಳಿಗೆ ಅಸಹಿಷ್ಣುತೆ ಹೊಂದಿರುವವರು ಉಪಯೋಗಿಸದಿದ್ದರೆ ಒಳಿತು.
ಎಳನೀರು: ಪ್ರಕೃತಿ ನೀಡಿರುವ ಅತ್ಯಂತ ಆರೋಗ್ಯವರ್ಧಕ ಪೇಯ ಎಳನೀರು. ಎಳನೀರಿನಲ್ಲಿ ವಿಟಮಿನ್ಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್ ಸಮೃದ್ಧವಾಗಿದೆ. ಇದರ ಸೇವನೆ ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್ಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಬೇಸಿಗೆಯ ದಿನದಲ್ಲಿ, ಬೆವರುವಿಕೆಯಿಂದಾಗಿ ಎಲೆಕ್ಟ್ರೋಲೈಟ್ಗಳು ಕಳೆದುಹೋಗುತ್ತವೆ ಮತ್ತು ಇದರಿಂದ ಸುಸ್ತಾಗುತ್ತದೆ. ಎಳನೀರು ಅವುಗಳನ್ನು ಮರುಪೂರಣಗೊಳಿಸಲು ಸಹಾಯ ಮಾಡಿ ನಾವು ಹೆಚ್ಚು ಉಲ್ಲಾಸಕರವಾಗಿರುವಂತೆ ಮಾಡುತ್ತದೆ.
ಬೇಸಿಗೆಯಲ್ಲಿ ಲಿಂಬೆ ಪಾನೀಯ, ಎಳ್ಳು ಜ್ಯೂಸ್, ಬೆಲ್ಲದ ಪಾನಕ, ತಂಪು ಬೀಜದ ಜ್ಯೂಸ್, ಕಲ್ಲಂಗಡಿ ಹಣ್ಣಿನ ಜ್ಯೂಸ್, ಆಮ್ ಪನ್ನಾ ಮತ್ತು ಜಲ್ ಜೀರಾ ಮುಂತಾದ ನೈಸರ್ಗಿಕ ಪಾನೀಯಗಳನ್ನು ಸೇವಿಸುವುದು ಒಳಿತು. ಮಾರುಕಟ್ಟೆಯಲ್ಲಿ ತಾಳೆಹಣ್ಣುಗಳು ಕೂಡಾ ಲಭ್ಯವಿರುವುದರಿಂದ ಇದೂ ಕೂಡಾ ಬೇಸಿಗೆಯ ಧಗೆಯನ್ನು ಕಡಿಮೆ ಮಾಡಲು ಸಹಕಾರಿ. ಜೀವ ಜಂತುಗಳಿಗೆ ಏನು ಬೇಕೆನ್ನುವುದು ಪ್ರಕೃತಿಗೂ ಗೊತ್ತು, ಹಾಗಾಗಿ ಬೇಸಿಗೆ ಕಾಲದಲ್ಲಿ ನೀರಿನಿಂದ ತುಂಬಿದ ಹಣ್ಣು-ಹಂಪಲುಗಳನ್ನು ಪ್ರಕೃತಿಯೇ ನಮಗೆ ನೀಡುತ್ತದೆ. ಮಾವು, ಗೇರು ಹಣ್ಣು, ಹಲಸು, ಹೆಬ್ಬಲಸು, ಲೀಚಿ ಮುಂತಾದ ಹಣ್ಣುಗಳಲ್ಲಿ ನೀರಿನ ಅಂಶ ಜಾಸ್ತಿ ಇರುತ್ತದೆ. ಇಂತಹ ಹಣ್ಣುಗಳ ನಿಯಮಿತ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಸಕ್ಕರೆ ಕಾಯಿಲೆ ಅಥವಾ ಹಣ್ಣುಗಳಿಗೆ ಅಲರ್ಜಿ ಹೊಂದಿದ್ದವರು ವೈದ್ಯರ ಸಲಹೆ ಪಡೆದು ಸೇವಿಸುವುದು ಒಳಿತು.
ಇದೆಲ್ಲದರ ಜೊತೆಗೆ ತಮ್ಮ ಅಂಗಂಡಿ ಮುಂಗಟ್ಟು, ಮನೆಯ ಬಾಲ್ಕನಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಸಣ್ಣ ಸಣ್ಣ ತೊಟ್ಟಿಗಳನ್ನು ಇಡುವುದನ್ನು ಮರೆಯಬಾರದು. ನಮ್ಮಂತೆಯೆ ಪ್ರಾಣಿ-ಪಕ್ಷಿ ಜಾನುವಾರುಗಳು ಕೂಡಾ ಬಿಸಿಲಿನ ಧಗೆಯಿಂದ ಬಸವಳಿದು ಬೆಂಡಾಗುತ್ತವೆ ಎನ್ನುವುದನ್ನು ನೆನಪಿಡಬೇಕು.