ಉಡುಪಿ: ಮಲ್ಪೆ ಮೊಣಕಾಲ್ಮೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169A ಯ ಹಿರಿಯಡ್ಕದ ಪುತ್ತಿಗೆ ಸಮೀಪದ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಪುತ್ತಿಗೆ ಸೇತುವೆಯ ಕುತ್ತಿಗೆ ಉಳುಕಿ ತುಂಬಾ ಸಮಯವಾದರೂ ಅದನ್ನು ರಿಪೇರಿ ಮಾಡುವ ಗೋಜಿಗೆ ಈ ವರೆಗೆ ಯಾರೂ ಹೋಗಿಲ್ಲ. ಹಾಗಾಗಿ ಸೇತುವೆಯೇ ಇನ್ನೇನು ಮುರಿದು ಕುಸಿತದ ಹಾದಿಯಲ್ಲಿದೆ.
ತಳ ಭಾಗದಲ್ಲಿ ಹಾಕಲಾಗಿದ್ದ ಆಧಾರ ಸ್ತಂಭಗಳು ಬೇರ್ಪಟ್ಟಿದೆ. ಎರಡು ಆಧಾರ ಸ್ತಂಭಗಳು ಕೆಳಭಾಗದಲ್ಲಿ ಕುಸಿದಿದ್ದು ಜನರು ಸೇತುವೆಯ ಮೇಲೆ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.
1950 ರ ದಶಕದಲ್ಲಿ ನಿರ್ಮಾಣ ಗೊಂಡಿದ್ದ ಈ ಸೇತುವೆಯನ್ನು ಕಳೆದ ವರ್ಷವಷ್ಟೆ ಮಳೆಗಾಲದ ಮುನ್ನ ದುರಸ್ಥಿ ಗೊಳಿಸಲಾಗಿತ್ತು. ಆದರೆ ಮಳೆಯ ಪ್ರವಾಹದಿಂದ ಕೆಲವು ವಸ್ತುಗಳು ಕೊಚ್ಚಿ ಹೋಗಿತ್ತು.
ಇನ್ನಾದರೂ ರಿಪೇರಿ ಮಾಡಿ: ಜನಗಳ ಆಗ್ರಹ:
ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಾಗುತ್ತಿದ್ದು, ಹೆಬ್ರಿ ಆಗುಂಬೆ ಶಿವಮೊಗ್ಗ ದಾವಣಗೆರೆ ಚಿಕ್ಕಮಗಳೂರು ಜಿಲ್ಲೆಗಳನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿಯಿದು. ಹತ್ತಿರದಲ್ಲಿಯೆ ಬಜೆ ಅಣೆಕಟ್ಟು ಇದೆ. ಉಡುಪಿ ಜನರ ಪಾಲಿಗೆ ಜೀವಾಳವಾಗಿರುವ ಸ್ವರ್ಣ ನದಿ ಈ ವರ್ಷವಷ್ಟೆ ಬತ್ತಿಹೋಗಿದ್ದು ನೀರಿಗಾಗಿ ತಾತ್ವಾರ ಪಡುವಂತಾಗಿದೆ. ಸೇತುವೆಯ ಆಧಾರ ಸ್ತಂಭದ ಕೆಳಭಾಗ ಕಾಣಿಸುತಿದೆ. ಮಳೆಗಾಲದ ಮಳೆಯ ಆರ್ಭಟ ಹಾಗು ಪ್ರವಾಹಕ್ಕೆ ತುಂಬಿಕೊಂಡು ಹೋಗುವ ನೀರಿನ ವೇಗಕ್ಕೆ ಸೇತುವೆ ಆಧಾರ ಸ್ತಂಭ ಬಲಿಯಾಗಬಹುದೆ?ಎಂಬುದು ಜನರ ಕಳವಳ.
ಕಳೆದ ವರ್ಷದ ಬಂಟ್ವಾಳದ ಮುಲಾರ ಪಟ್ಣ ಸೇತುವೆ ಮಳೆಗಾಲದ ಪ್ರವಾಹಕ್ಕೆ ಕುಸಿದು ಸಂಚಾರಕ್ಕೆ ತೊಡಕಾಗಿತ್ತು. ಅಂತಹ ಇನ್ನೊಂದು ದುರಂತ ಇಲ್ಲಿ ಮರುಕಳಿಸಬಾರದು, ಅದಕ್ಕಿಂತ ಮೊದಲೇ ಈ ಸೇತುವೆ ದುರಸ್ಥಿ ಗೊಳಿಸಬೇಕು ಎನ್ನುವುದು ಸಾರ್ವಜನಿಕ ರ ಆಗ್ರಹ.
ಹಗ್ಗದ ಮೇಲೆ ಸವಾರಿ ಮಾಡಿಕೊಂಡು ಸಾಗಿ ಜೀವ ಕೈಯಲ್ಲಿ ಹಿಡಕೊಂಡು ಹೋದಂತೆ ಅನ್ನಿಸುವ ಈ ಸೇತುವೆ ದುರಸ್ತಿಗೊಳಿಸುವ ಜವಾಬ್ದಾರಿ ಹೆದ್ದಾರಿ ಪ್ರಾಧಿಕಾರದ್ದು .ಅಲ್ಲದೇ ಇಲ್ಲಿ ಎಚ್ಚರಿಕೆಯ ಫಲಕಗಳ ಅಳವಡಿಸುವಿಕೆಯ ಅಗತ್ಯವೂ ಇದೆ ಎನ್ನುತ್ತಾರೆ ಮಣಿಪಾಲದ ಸಾಮಾಜಿಕ ಕಾರ್ಯಕರ್ತ ಸ್ಯಾಂ ಮಣಿಪಾಲ
*ಚಿತ್ರ:ವರದಿ:
ರಾಮ್ ಅಜೆಕಾರು