ಉಡುಪಿ: ನಟಿ ಸುಮಲತಾ ಅಂಬರೀಶ್ ಅವರ ಬಗ್ಗೆ ಸಚಿವ ರೇವಣ್ಣ ಹಗುರ ಮಾತನಾಡಿರುವುದು ಅಕ್ಷಮ್ಯ. ಕೀಳುಮಟ್ಟ ಭಾಷೆ ಬಳಸಿ ಮಹಿಳಾ ದಿನಾಚರಣೆಯಂದೇ ಓರ್ವ ಮಹಿಳೆಗೆ ಅವಮಾನ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯಲ್ಲಿ ಇಂದು ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಂಡ ಸತ್ತವರು ರಾಜಕೀಯಕ್ಕೆ ಬರಬಾರದೆಂದು ಕಾನೂನಿಲ್ಲ. ಗಂಡನನ್ನು ಕಳೆದುಕೊಂಡು ನೋವಿನಲ್ಲಿರುವವರಿಗೆ ಮತ್ತೆ ನೋವು ಕೊಡಬಾರದು. ರೇವಣ್ಣ ಓರ್ವ ಜವಾಬ್ದಾರಿಯುತ ರಾಜಕಾರಣಿಯಾಗಿ ಹೀಗೆ ಮಾತನಾಡಿರುವುದು ಸರಿಯಲ್ಲ. ಅವರು ಕೂಡಲೇ ಸುಮಲತಾ ಅವರ ಕ್ಷಮೆ ಕೋರಬೇಕು ಎಂದರು.
ಸದ್ಯ ಸುಮಲತಾ ಕಾಂಗ್ರೆಸ್ ಮನೆಯ ರಾಜಕಾರಣಿ. ಅವರು ಬಿಜೆಪಿಗೆ ಬಂದ್ರೆ ಸ್ವಾಗತ ಎಂದು ತಿಳಿಸಿದರು.
ಕಾಂಗ್ರೆಸ್ ಗೆ ಸೋಲಿನ ಭೀತಿ:
ದೇಶದಲ್ಲಿ ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಹಾಗಾಗಿ ಅದು ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದೆ. ಕಾಂಗ್ರೆಸ್ ನಾಯಕರು ನಿರಂತರವಾಗಿ ಸೈನಿಕರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬರುವುದಿಲ್ಲ ಅಂಥಾ ಗೊತ್ತಿದ್ದು, ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ.
ದೇಶದ್ರೋಹದ ಬಗ್ಗೆ ಮಾತನಾಡಿದ ಯಾರಿಗೂ ಕಾಂಗ್ರೆಸ್ ಶಿಕ್ಷೆ ಕೊಟ್ಟಿಲ್ಲ. ಪುಲ್ವಾಮಾ ಘಟನೆ ಬಗ್ಗೆ ಕಾಂಗ್ರೆಸ್ ನಿಲುವೇನು ಎಂದು ಪ್ರಶ್ನಿಸಿದರು.