ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಇಂದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ‘ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ’ (Neil Gehrels Swift Observatory) ಹೆಸರಿನ ಈ ಉಪಗ್ರಹದ ಅವಶೇಷಗಳು ಭೂಮಿಯ ಯಾವ ಭಾಗದಲ್ಲಿ ಪತನಗೊಳ್ಳಲಿವೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಬೆಂಗಳೂರು ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳೂ ಸೇರಿರುವುದು ಕುತೂಹಲ ಮೂಡಿಸಿದೆ.
ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ ಸುಮಾರು 2 ಗಂಟೆಯೊಳಗೆ ಉಪಗ್ರಹ ಭೂಮಿಯ ವಾತಾವರಣ ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದೆ. ವಾತಾವರಣ ಪ್ರವೇಶಿಸುವ ಸಂದರ್ಭದಲ್ಲಿ ಉಂಟಾಗುವ ತೀವ್ರ ಶಾಖದಿಂದ ಉಪಗ್ರಹದ ಬಹುತೇಕ ಭಾಗಗಳು ಸುಟ್ಟು ನಾಶವಾಗುವ ಸಾಧ್ಯತೆಯಿದೆ. ಆದರೆ, ಕೆಲವು ಗಟ್ಟಿಯಾದ ಲೋಹದ ಬಿಡಿಭಾಗಗಳು ಸುಡದೆ ಭೂಮಿಯ ಮೇಲ್ಮೈ ತಲುಪುವ ಸಾಧ್ಯತೆಯೂ ಇದೆ.
ಸಂಭಾವ್ಯ ಪತನ ವಲಯದಲ್ಲಿ ಬೆಂಗಳೂರು, ಮುಂಬೈ, ಚೆನ್ನೈ
ಉಪಗ್ರಹದ ಅವಶೇಷಗಳು ಎಲ್ಲಿ ಬೀಳಲಿವೆ ಎಂಬುದನ್ನು ಸದ್ಯಕ್ಕೆ ನಿಖರವಾಗಿ ನಿರ್ಧರಿಸಲು ಸಾಧ್ಯವಾಗಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ, ಭಾರತ, ಆಗ್ನೇಯ ಏಷ್ಯಾ ಹಾಗೂ ಮಧ್ಯ ಮತ್ತು ದಕ್ಷಿಣ ಅಮೆರಿಕದ ಕೆಲವು ಪ್ರದೇಶಗಳು ಸೇರಿವೆ. ಭಾರತದ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ನಗರಗಳೂ ಈ ವ್ಯಾಪ್ತಿಯಲ್ಲಿವೆ.
ಆದರೆ, ಈ ನಗರಗಳ ಮೇಲೆಯೇ ಉಪಗ್ರಹದ ಅವಶೇಷಗಳು ಪತನಗೊಳ್ಳಲಿವೆ ಎಂದರ್ಥವಲ್ಲ. ಪತನದ ನಿಖರ ಸ್ಥಳದ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ. ಉಪಗ್ರಹದ ಹೆಚ್ಚಿನ ಅವಶೇಷಗಳು ಜನವಸತಿಯಿಲ್ಲದ ಸಮುದ್ರ ಪ್ರದೇಶಕ್ಕೆ ಬೀಳುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಉಪಗ್ರಹದ ಕೆಲವು ಅವಶೇಷಗಳು ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ ಅಥವಾ ಮಧ್ಯ ಮತ್ತು ದಕ್ಷಿಣ ಅಮೆರಿಕದ ಪ್ರದೇಶಗಳಲ್ಲಿಯೂ ಪತನಗೊಳ್ಳಬಹುದು. ಉಪಗ್ರಹವು ಭೂಮಿಯ ವಾತಾವರಣ ಪ್ರವೇಶಿಸುವ ಕ್ಷಣದಲ್ಲಿ ಅದರ ಕಕ್ಷೆಯಲ್ಲಿನ ಸ್ಥಾನವನ್ನು ಆಧರಿಸಿ ಪತನದ ಪ್ರದೇಶ ನಿರ್ಧಾರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಉಪಗ್ರಹದ ಅವಶೇಷಗಳು ಸಮುದ್ರಕ್ಕೆ ಬೀಳುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ.















