ಬೆಂಗಳೂರು: ಬೆಂಗಳೂರಿನ ಜೆ.ಪಿ ನಗರದ ಆರ್ ಬಿ ಐ ಲೇಔಟ್ ಬಿಬಿಎಂಪಿ ಆಟದ ಮೈದಾನದಲ್ಲಿ ನಮ್ಮ ಕರಾವಳಿ ಉತ್ಸವ ಆಯೋಜಿಸಲಾಗಿದೆ. ಕರಾವಳಿಗರ ಒಕ್ಕೂಟ (ರಿ)ಬೆಂಗಳೂರು ಇವರ ನೇತೃತ್ವದಲ್ಲಿ ಫೆಬ್ರವರಿ 25ರ ಭಾನುವಾರ ನಮ್ಮ ಕರಾವಳಿ ಉತ್ಸವ ನಡೆಯಲಿದೆ. ನಮ್ಮ ಕರಾವಳಿ ಉತ್ಸವಕ್ಕೆ ಒಂದು ಲಕ್ಷ ಜನ ಸೇರುವ ನಿರೀಕ್ಷೆ ಎಂದು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿದ ಕರಾವಳಿ ಒಕ್ಕೂಟ ಬೆಂಗಳೂರಿನ ಅದ್ಯಕ್ಷ ಕೆ. ಸುಬ್ರಾಯ ಭಟ್ ಹೇಳಿದರು.
ಈ ಉತ್ಸವದಲ್ಲಿ ಕರಾವಳಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮನು ಹಂದಾಡಿಯವರಿಂದ ನಗೆ ಹಬ್ಬ, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಮೂಡಬಿದ್ರೆ ಇವರ ನಗೆ ಬುಗ್ಗೆ, ಅಂಭಾಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಪರ್ಕಳ ಇವರಿಂದ ಕರಾವಳಿ ಕಲಾ ವೈಭವ, ಹುಲಿ ಕುಣಿತ, ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ಇವರಿಂದ ಶಿವದೂತ ಪಂಜುರ್ಲಿ ಯಕ್ಷಗಾನ, ಕರಾವಳಿಯ ಹುಲಿವೇಷ, ಗ್ರಾಮೀಣ ಕ್ರೀಡೆಗಳಾದ ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಚುಕ್ಕಿ ರಂಗೋಲಿ, ಚಿತ್ರಕಲೆ, ಕೊಟ್ಟೆ ಕಟ್ಟುವ ಸ್ಪರ್ಧೆ ಹಾಗೂ ಇನ್ನೂ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಕರಾವಳಿಯ ಸ್ವಾದಿಷ್ಟ ಖಾದ್ಯಗಳ ಆಹಾರ ಮೇಳ ದಲ್ಲಿ ರುಚಿ ರುಚಿಯ ಕರಾವಳಿ ಖಾದ್ಯಗಳ ಅನಾವರಣ ನಡೆಯಲಿದ್ದು ವಿಶೇಷ ತಿಂಡಿ ತಿನಿಸುಗಳು ಜನರನ್ನ ಆಕರ್ಷಿಸಲಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಈ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಅದಕ್ಕೆ ಬೇಕಾದ ಸಿದ್ದತೆ ಮಾಡಲಾಗಿದೆ. ಪ್ರಸಿದ್ದ ನಟ ನಟಿಯರು, ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಕರಾವಳಿ ಒಕ್ಕೂಟದ ಅಧ್ಯಕ್ಷರಾದ ಕೆ.ಸುಬ್ರಾಯ್ ಭಟ್ ಮಾಹಿತಿ ಹಂಚಿಕೊಂಡಿದ್ದಾರೆ.ಹಾಗೇ ಕರಾವಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚರಣ್ ಬೈಂದೂರ್ ಮಾತನಾಡಿ ಕಾಸರಗೋಡು ನಿಂದ ಕಾರವಾರದ ವರೆಗಿನ ಕರಾವಳಿಗರನ್ನು ಸೇರಿಸಿಕೊಂಡು ಕರಾವಳಿ ಉತ್ಸವ ಮಾಡುತ್ತಿದ್ದೆವೆ ಎಂದರು.
ಕರಾವಳಿ ಕಂಪನ್ನ ಎಲ್ಲೆಡೆ ಪಸರಿಸಬೇಕು.
ಭೂತಾರಾಧನೆ, ಹುಲಿ ಕುಣಿತ,ಯಕ್ಷಗಾನ, ಆಹಾರ,ಆಚಾರ ವಿಚಾರವನ್ನು ಹೆಚ್ಚಿನ ಬೆಂಗಳೂರಿನ ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದ್ದು ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಬೆಳಗ್ಗೆ 9 ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ರಾತ್ರಿಯವರೆಗೂ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಬಿ ಆರ್ ದೇವಾಡಿಗ, ಮಂಜುನಾಥ್ ಸಿ, ಸಂಘಟನಾ ಕಾರ್ಯದರ್ಶಿ ಸುರೇಶ್ ಪೈ ಸೇರಿ ಹಲವರು ಉಪಸ್ಥಿತರಿದ್ದರು.